ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ವಾರ್ತೆ
ಬೆಂಗಳೂರು: ಮುಂದಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ‘ಆರನೇ ಗ್ಯಾರಂಟಿ’ ಜಾರಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದ್ದ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಆರನೇ ಗ್ಯಾರಂಟಿ (ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 15 ಸಾವಿರ, ಸಹಾಯಕಿಯರಿಗೆ ₹ 10 ಸಾವಿರ) ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸಿದೆ. ಇನ್ನೂ ಯೋಜನೆ ಜಾರಿಗೆ ಬಂದಿಲ್ಲ. ತಕ್ಷಣವೇ ಯೋಜನೆ ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘2022ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ನಿವೃತ್ತರಾದ ಎಲ್ಲ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ‘ನಾಗರಿಕ ಸೇವೆ’ಗೆ ಸಮಾನವಾಗಿ ಪರಿಗಣಿಸಬೇಕು ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ. ರಾಜ್ಯದಲ್ಲೂ ‘ಸಿ’ ಮತ್ತು ‘ಡಿ’ ದರ್ಜೆ ನೌಕರರ ಸ್ಥಾನಮಾನ ನೀಡುವ ಮೂಲಕ ಕಾಯಂ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಎಐಟಿಯುಸಿ ರಾಜ್ಯ ಅಧ್ಯಕ್ಷ ಬಿ.ಅಮ್ಜದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ವಹಿಸಿದ್ದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪ್ರತಿಭಟನಕಾರರ ಮನವಿ ಸ್ವೀಕರಿಸಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಇದೇ ಸ್ಥಳದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ಮೇರೆಗೆ ಪ್ರತಿಭಟನೆ ಮುಂದೂಡಿದೆ. ‘ಸಚಿವರು ಕರೆ ಮಾಡಿ ಮಾತುಕತೆ ನಡೆಸಿದರು. ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕಾರಣ ಪ್ರತಿಭಟನಾ ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸಚಿವರು ಮನವಿ ಮಾಡಿಕೊಂಡರು. ಬಜೆಟ್‌ನಲ್ಲಿ ನ್ಯಾಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಭಾನುವಾರ ರಾತ್ರಿಯೇ ಪ್ರತಿಭಟನೆ ಸ್ಥಗಿತಗೊಳಿಸಿ ಕೆಲಸಕ್ಕೆ ಮರಳಿದ್ದೇವೆ’ ಎಂದು ಸಮಿತಿ ರಾಜ್ಯ ಅಧ್ಯಕ್ಷೆ ಬಿ.ಪ್ರೇಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.