ADVERTISEMENT

ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು: ಸಚಿವ ಭೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 18:06 IST
Last Updated 27 ಫೆಬ್ರುವರಿ 2021, 18:06 IST
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಕೆ.ಆರ್. ಪುರ ವಾರ್ಡ್‌ನ ಪಿಯರ್‌ಲೆಸ್‌ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ಶ್ರೀಕಾಂತ್, ಭಟ್ಟರಹಳ್ಳಿ ಮಂಜುನಾಥ್ ಇದ್ದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಕೆ.ಆರ್. ಪುರ ವಾರ್ಡ್‌ನ ಪಿಯರ್‌ಲೆಸ್‌ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ಶ್ರೀಕಾಂತ್, ಭಟ್ಟರಹಳ್ಳಿ ಮಂಜುನಾಥ್ ಇದ್ದರು.   

ಕೆ.ಆರ್.ಪುರ: ‘ಕ್ಷೇತ್ರದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ನಿರ್ಮಾಣ ಸೇರಿದಂತೆ ಎಲ್ಲ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಹಂತ–ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

ಕೆ.ಆರ್.ಪುರದ ಹೊರಮಾವು ವಾರ್ಡ್ ಹಾಗೂ ಕೆ.ಆರ್.ಪುರ ವಾರ್ಡ್‌ನಲ್ಲಿ ₹10 ಕೋಟಿ ವೆಚ್ಚದ ರಸ್ತೆ, ಚರಂಡಿ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಜನಪರ ಯೋಜನೆಗಳನ್ನು ರೂಪಿಸುತ್ತಿದ್ದು ಕುಡಿಯುವ ನೀರು ಸರಬರಾಜು, ಚರಂಡಿ, ರಸ್ತೆ, ಸಮುದಾಯ ಭವನ, ಬಡಾವಣೆಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡು ಸೌಲಭ್ಯ ಒದಗಿಸಲಾಗುತ್ತದೆ. ಪರಿಸರವನ್ನು ಪರಿಣಾಮಕಾರಿಯಾಗಿ ಉಳಿಸಲು ಕೆರೆ ಅಭಿವೃದ್ಧಿ, ರಸ್ತೆ ಬದಿ ಗಿಡ ನೆಡುವ ಕಾರ್ಯ, ಸ್ವಚ್ಚ ಭಾರತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿ ಕ್ಷೇತ್ರ ಮಾಡುವ ಗುರಿ ಹೊಂದಲಾಗಿದೆ’ ಎಂದರು.

ADVERTISEMENT

ಪಾಲಿಕೆಮಾಜಿ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ‘ಸಾರ್ವಜನಿಕರ ಒತ್ತಾಯದಂತೆ ಪಿಯರ್‌ಲೆಸ್‌ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಚಿವ ಬೈರತಿ ಬಸವರಾಜ ಅವರ ಮಾರ್ಗದರ್ಶನದಲ್ಲಿ ಕೆ.ಆರ್.ಪುರ ವಾರ್ಡ್ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.

ಪಾಲಿಕೆಮಾಜಿ ಸದಸ್ಯ ಶ್ರೀಕಾಂತ್, ಭಟ್ಟರಹಳ್ಳಿ ಮಂಜುನಾಥ್, ಕೆ.ಆರ್.ಪುರ ಬಿಜೆಪಿ ಉಪಾಧ್ಯಕ್ಷರಾದ ರವಿಕುಮಾರ್, ಶಿವಪ್ಪ, ಮುಖಂಡರಾದ ರಮೇಶ್, ಕೃಷ್ಣ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.