ADVERTISEMENT

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌: ಮಾಧ್ಯಮ–ಪೌರತ್ವ– ಅಸ್ಮಿತೆಗಳು ಸಂವಾದ

‘ಪ್ರತಿಭಟನೆಯಲ್ಲ; ಪ್ರೀತಿಯ ಕ್ರಾಂತಿ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:24 IST
Last Updated 7 ಫೆಬ್ರುವರಿ 2020, 19:24 IST
ಶಶಿ ದೇಶಪಾಂಡೆ
ಶಶಿ ದೇಶಪಾಂಡೆ   

ಬೆಂಗಳೂರು: ‘ಬಹುತ್ವ ಎನ್ನುವುದು ಭಾರತೀಯ ಸಮಾಜದ ಆಭರಣದಂತೆ. ಆದರೆ, ಇಂದು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡುತ್ತಿದ್ದಾರೆ. ಹಿಂದೂ–ಮುಸ್ಲಿಂ ಏಕತೆಗೆ ದುಡಿದ ಮಹಾತ್ಮ ಗಾಂಧಿಯಂತಹ ವ್ಯಕ್ತಿಯನ್ನು ಟೀಕಿಸುತ್ತಿದ್ದಾರೆ’ ಎಂದು ಹಿರಿಯ ಕಾದಂಬರಿಗಾರ್ತಿ ಶಶಿ ದೇಶಪಾಂಡೆ ಹೇಳಿದರು.

ಮಾಧ್ಯಮ, ಪೌರತ್ವ ಹಾಗೂ ಅಸ್ಮಿತೆ ಕುರಿತು ನೆಟ್‌ವರ್ಕ್‌ ಆಫ್‌ ವುಮೆನ್‌ ಇನ್ ಮೀಡಿಯಾ, ಇಂಡಿಯಾ ( ಎನ್‌ಡಬ್ಲ್ಯುಎಂಐ) ಸಂಸ್ಥೆಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದರು.

‘ದ್ವೇಷ ರಾಜಕಾರಣ ಮತ್ತು ಧ್ರುವೀಕರಣವೇ ಇಂದು ನಮ್ಮ ಬದುಕಿನ ಭಾಗವಾಗುತ್ತಿದೆ. ಆದರೆ, ಆರ್ಥಿಕ ಪ್ರಕ್ರಿಯೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಎಲ್ಲಿ ಆರ್ಥಿಕ ಪ್ರಗತಿ ಇರುವುದಿಲ್ಲವೋ ಅಲ್ಲಿ ಸಾಮಾಜಿಕ ಸಾಮರಸ್ಯವೂ ಇರುವುದಿಲ್ಲ’ ಎಂದರು.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

‘ದಲಿತ ಎಂದು ಹಾಲಿನ ಪ್ಯಾಕೆಟ್ ಬರಲಿಲ್ಲ’

‘ನನ್ನ ತಂದೆ ದಲಿತರು. ದೊಡ್ಡ ದೇಶಪ್ರೇಮಿ. ನಾನು ಗೋಮಾಂಸ ತಿನ್ನುವುದು ನನ್ನ ತಂದೆಗೆ ದೇಶವಿರೋಧಿ ನಡೆ ಎನಿಸುತ್ತಿತ್ತೇನೋ. ಅದಕ್ಕೆ ಮನೆಯಲ್ಲಿ ತಿನ್ನಬೇಡ. ಹೊರಗೆ ಹೋಗಿ ಬೇಕಾದರೆ ತಿನ್ನು ಎಂದು ಹೇಳುತ್ತಿದ್ದರು’ ಎಂದು ಸೇಂಟ್‌ ಜೋಸೆಫ್‌ ಕಾಲೇಜಿನ ಪ್ರೊಫೆಸರ್‌ ವಿಜೇತಾ ಕುಮಾರ್‌ ಹೇಳಿದರು.

‘ನನ್ನ ತಾಯಿಗೆ ಬಸವನಗುಡಿಯಲ್ಲಿ ಮನೆ ಮಾಡಬೇಕು ಎಂಬ ಆಸೆ ಇತ್ತು. ಬ್ರಾಹ್ಮಣರೇ ಬಹುಸಂಖ್ಯಾತರಾಗಿರುವ ಆ ಪ್ರದೇಶದಲ್ಲಿ ಮನೆ ಮಾಡಿದರೆ ಸಾಮಾಜಿಕ ಮನ್ನಣೆ ಸಿಗಬಹುದು ಎಂಬ ನಂಬಿಕೆ ಅವಳದ್ದಾಗಿತ್ತೇನೋ. ಮೊದಲು ಪಕ್ಕದ ಬ್ರಾಹ್ಮಣರ ಮನೆಯಿಂದ ಪ್ರತಿ‌ದಿನ ಹಾಲಿನ ಪ್ಯಾಕೆಟ್‌ ಬರುತ್ತಿತ್ತು. ದಲಿತರು ಎಂದು ತಿಳಿದ ಮೇಲೆ ಬರುವುದೇ ನಿಂತಿತು. ಇಂತಹ ಸನ್ನಿವೇಶದಲ್ಲಿ ಪೌರತ್ವ ಕುರಿತು ಮಾತನಾಡುವುದೇ ವ್ಯಂಗ್ಯ ಎನಿಸುತ್ತದೆ’ ಎಂದರು.

****

ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ನಂತರ ಸಾವಿರಾರು ಜನ ಬಂಧನ ಕೇಂದ್ರಗಳಲ್ಲಿದ್ದಾರೆ. ಇದನ್ನೇ ಇಡೀ ದೇಶದಲ್ಲಿ ತರಲು ಸರ್ಕಾರ ಹೊರಟಿದೆ. ದಾಖಲೆಗಳಲ್ಲಿನ ಸಣ್ಣ ಕಾಗುಣಿತ ದೋಷವಿದ್ದರೂ ಪೌರತ್ವವನ್ನು ನಿರಾಕರಿಸಲಾಗುತ್ತಿದೆ.

ಆಕಾರ್‌ ಪಟೇಲ್, ಅಂಕಣಕಾರ

ಸಾಮಾಜಿಕ ವಾಸ್ತವಿಕತೆಯ ಆಧಾರದ ಮೇಲೆ ಸಿಎಎ ರೂಪಿಸಲಾಗಿದೆ. ದೇಶದಲ್ಲಿ ದಲಿತರಿಗಿಂತ ಕೆಟ್ಟದಾಗಿ ಭಾರತೀಯ ಮುಸ್ಲಿಮರನ್ನು ನಡೆಸಿಕೊಂಡಿರುವ ಇತಿಹಾಸವಿದೆ. ರಾಷ್ಟ್ರೀಯತೆಯ ವಿಷಯ ಬಂದಾಗ ಪೌರತ್ವ ಸಾಬೀತುಪ‍ಡಿಸಬೇಕೆಂಬುದು ಸವಾಲಿನ ವಿಷಯವೇನಲ್ಲ.

ಮಾಲಿನಿ ಭಟ್ಟಾಚಾರ್ಜಿ, ಅಜೀಂ ಪ್ರೇಮ್‌ಜಿ ವಿವಿ ಪ್ರಾಧ್ಯಾಪಕಿ

ಬ್ರಿಟಿಷರ ಕಾಲದಲ್ಲಿ, ತುರ್ತು ಪರಿಸ್ಥಿತಿ ವೇಳೆಯೂ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಆದರೆ, ಆಗ ಯಾರೂ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳನ್ನು ನಾಶ ಮಾಡಿರಲಿಲ್ಲ. ಏಕೆಂದರೆ, ಬ್ರಿಟಿಷರೂ ಪುಸ್ತಕ ಓದಿದ್ದರು. ಇಂದಿರಾಗಾಂಧಿಯೂ ಪುಸ್ತಕ ಓದಿದ್ದರು.

ರಾಮಚಂದ್ರ ಗುಹಾ, ಇತಿಹಾಸಕಾರ

ಎನ್‌ಪಿಆರ್‌ ಮತ್ತಿತರ ಉದ್ದೇಶಗಳಿಗೆ ಜನರ ಮಾಹಿತಿ ಮತ್ತು ಮಾಹಿತಿ ಸಂಗ್ರಹಿಸಲಾಗುತ್ತದೆ. ಕಾನೂನು ಪ್ರಕಾರ ಇಂತಹ ಜನಗಣತಿಯ ಮಾಹಿತಿಯನ್ನು ಗೋಪ್ಯವಾಗಿಡಬೇಕಾಗುತ್ತದೆ. ಈಗ ಕಾನೂನುಬಾಹಿರವಾಗಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.

ರವಿವರ್ಮಕುಮಾರ್, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.