ADVERTISEMENT

ಅಮೂಲ್ಯಾ ಸ್ನೇಹಿತರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:44 IST
Last Updated 24 ಫೆಬ್ರುವರಿ 2020, 19:44 IST

ಬೆಂಗಳೂರು:‘ದೇಶದ್ರೋಹ’ ಆರೋಪದಡಿ ಜೈಲು ಸೇರಿರುವ ಅಮೂಲ್ಯಾ ಲಿಯೋನ್‌ (19) ಅವರ ಸ್ನೇಹಿತರು ಹಾಗೂ ಪ್ರತಿಭಟನೆ ಆಯೋಜಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಿರುವ ಪಶ್ಚಿಮ ವಿಭಾಗದ ಪೊಲೀಸರು, ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯಾಳನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಅಮೂಲ್ಯಾಳ ಜೊತೆ ಕೆಲ ಸ್ನೇಹಿತರು ಪಾಲ್ಗೊಳ್ಳುತ್ತಿದ್ದರು. ಕಾಲೇಜಿನಲ್ಲೂ ಕೆಲ ಸ್ನೇಹಿತೆಯರು ಆಕೆ ಜೊತೆ ಒಡನಾಟವಿಟ್ಟುಕೊಂಡಿದ್ದರು. ಅವರೆಲ್ಲರನ್ನೂ ಉಪ್ಪಾರಪೇಟೆ ಠಾಣೆಗೆ ಸೋಮವಾರ ಕರೆಸಿಕೊಂಡಿದ್ದ ಪೊಲೀಸರು, ಕೆಲ ಗಂಟೆ ವಿಚಾರಣೆ ನಡೆಸಿದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಅಮೂಲ್ಯಾ, ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಆರಂಭದಲ್ಲಿ ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯುತ್ತಿದ್ದರು. ಸಿಎಎ ವಿರುದ್ಧ ಪ್ರತಿಭಟನೆಗಳು ಆರಂಭವಾಗುತ್ತಿದ್ದಂತೆ, ಅವುಗಳತ್ತ ವಾಲಿದ್ದರು. ಈ ಸಂಬಂಧ ಆಕೆ ಹಲವು ಸ್ನೇಹಿತರ ಜೊತೆಯಲ್ಲಿ ಚರ್ಚಿಸಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿತ್ತು.

ADVERTISEMENT

ಪಾಲಿಕೆ ಸದಸ್ಯನ ವಿಚಾರಣೆ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆಯೋಜನೆಗೆ ಅನುಮತಿ ಪಡೆದಿದ್ದ ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್ ಪಾಷಾ ಅವರನ್ನು ಎರಡನೇ ಬಾರಿ ವಿಚಾರಣೆಗೆ ಕರೆಸಲು ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.