ADVERTISEMENT

ಅಪಾರ್ಟ್‌ಮೆಂಟ್‌ ಮಾಲೀಕರು ಬಿಲ್ಡರ್‌ ವ್ಯಾಜ್ಯ: ಮಾತುಕತೆಯ ಪರಿಹಾರಕ್ಕೆ ನಿರ್ದೇಶನ

ಪರಿಷ್ಕೃತ ಅನುಮೋದನೆ ಪ್ರಶ್ನಿಸಿದ ಅರ್ಜಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 20:29 IST
Last Updated 17 ಜನವರಿ 2019, 20:29 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ನಗರದ ಎಚ್‌.ಎಂ.ಟ್ಯಾಂಬರೀನ್‌ ಅಪಾರ್ಟ್‌ಮೆಂಟ್ಸ್‌ನ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿದ ತಕರಾರಿಗೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ ಮಾಲೀಕರು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕಟ್ಟಡ ನಿರ್ಮಾಣ ಕಂಪನಿಯ ಪ್ರತಿನಿಧಿಗಳು ಮಾತುಕತೆಯ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಈ ಕುರಿತಂತೆ ಉತ್ತರಹಳ್ಳಿ ಹೋಬಳಿಯ ಜರಗನಹಳ್ಳಿಯ ಕನಕಪುರ ಮುಖ್ಯ ರಸ್ತೆಯಲ್ಲಿರುವ ಎಚ್‌.ಎಂ.ಟ್ಯಾಂಬರೀನ್‌ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ ಅಧ್ಯಕ್ಷ ಪ್ರದೀಪ್‌ ರಾವ್‌ ಮತ್ತು ಕಾರ್ಯದರ್ಶಿ ಎಂ.ಹೇಮೇಂದ್ರ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರೂ ಆದ ಎಚ್‌.ಎಂ.ಟ್ಯಾಂಬರೀನ್‌ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ್ ಅವರು, ‘ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಬಿಡಿಎಗೆ ಇಲ್ಲ’ ಎಂದರು.

ADVERTISEMENT

‘ಈ ಕ್ರಮ ಸಂಪೂರ್ಣ ಕಾನೂನುಬಾಹಿರ. ಒಂದೊಮ್ಮೆ ಮಾಡುವುದಾದರೆ ಅದಕ್ಕೆ ಕಾಮಗಾರಿ ಜಾರಿಯಲ್ಲಿರುವ ಯೋಜನೆಯಲ್ಲಿ ಮಾತ್ರವೇ ಅವಕಾಶವಿದೆ. ಪೂರ್ಣಗೊಂಡ ಯೋಜನೆಗೆ ಈ ರೀತಿಯ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲು ಬರುವುದಿಲ್ಲ’ ಎಂದು ಪ್ರತಿಪಾದಿಸಿದರು.

‘2003ರಲ್ಲಿ ಮೂಲ ಯೋಜನೆಗೆ ಅನುಮತಿ ನೀಡಲಾಗಿದೆ. ಇದರ ಪರಿವರ್ತನೆಗೆ ಅರ್ಜಿದಾರರು ಅನುಮತಿ ಕೊಟ್ಟಿಲ್ಲ. ಇದು ಬಿಡಿಎ ಮತ್ತು ಡೆವಲಪರ್ಸ್‌ ನಡುವಿನ ಒಳ ಒಪ್ಪಂದವಾಗಿದೆ’ ಎಂದು ದೂರಿದರು.

ಪ್ರಕರಣವೇನು?: ಮೂರು ಎಕರೆ 18 ಗುಂಟೆ ಪ್ರದೇಶದ ಜಮೀನಿನಲ್ಲಿ ಎಚ್‌.ಎಂ.ಟ್ಯಾಂಬರೀನ್‌ ಅಪಾರ್ಟ್‌ಮೆಂಟ್ಸ್‌ ನಾಲ್ಕು ಅಪಾರ್ಟ್‌ಮೆಂಟ್‌ ಬ್ಲಾಕ್‌ಗಳನ್ನು ಹೊಂದಿದೆ. ಇದರಲ್ಲಿ ಒಟ್ಟು 242 ಅಪಾರ್ಟ್‌ಮೆಂಟ್‌ಗಳಿವೆ.

242 ಅಪಾರ್ಟ್‌ಮೆಂಟ್‌ ಕಟ್ಟಿದ ನಂತರ ಉಳಿದಿದ್ದ 32 ಗುಂಟೆ ಜಾಗದಲ್ಲಿ ಮತ್ತಷ್ಟು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಡೆವಲಪರ್ಸ್‌, ಯೋಜನೆಯ ಪರಿಷ್ಕೃತ ಅನುಮೋದನೆಗೆ 2016ರ ಡಿಸೆಂಬರ್‌ನಲ್ಲಿ ಅನುಮತಿ ಪಡೆದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಹೈಕೋರ್ಟ್‌ ನೀಡಿರುವ ಆದೇಶ ಏನು?

* ಹೈಕೋರ್ಟ್‌ನಲ್ಲಿರುವ ಹಿರಿಯ ವಕೀಲರ ಸಭಾಂಗಣದಲ್ಲಿ ಪಕ್ಷಗಾರರು ಸೌಹಾರ್ದ ಮಾತುಕತೆಯ ಮೂಲಕ ಇದೇ 29ರ ಒಳಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.

* ಅರ್ಜಿದಾರರು ಮತ್ತು ಪ್ರತಿವಾದಿಗಳ ಕಡೆಯಿಂದ ತಲಾ ಐವರಿಗಿಂತ ಹೆಚ್ಚಿನ ಪ್ರತಿನಿಧಿಗಳು ಈ ಮಾತುಕತೆಯಲ್ಲಿ ಇರಬಾರದು.

* ತಂತ್ರಜ್ಞರು, ಎಂಜಿನಿಯರ್‌ಗಳೂ ಭಾಗವಹಿಸಿಬೇಕು.

* ಮಾತುಕತೆಯ ವಿವರಗಳನ್ನು ಮೊಬೈಲ್‌ ಫೋನ್‌ ಅಥವಾ ಯೋಗ್ಯ ಸಾಧನದ ಮೂಲಕ ವಿಡಿಯೊ ಮಾಡಿಕೊಳ್ಳಬೇಕು.

* ಒಂದೊಮ್ಮೆ ಈ ಸಂಧಾನ ಮಾತುಕತೆ ನಡೆಯದೇ ಹೋದಲ್ಲಿ ವಿಚಾರಣೆ ಮುಂದೂಡಿಕೆಗೆ ಅವಕಾಶ ನೀಡುವುದಿಲ್ಲ. ಪ್ರಕರಣದ ಮೆರಿಟ್ ಆಧಾರದಲ್ಲಿ ವಿಚಾರಣೆ ಆಲಿಸಿ ಆದೇಶ ನೀಡಲಾಗುವುದು.

ಅರ್ಜಿದಾರರ ವಾದವೇನು?

* ನಮಗೆ ಈಗಾಗಲೇ ಸ್ವಾಧೀನಾನುಭವ ಪ್ರಮಾಣ ಪತ್ರ (ಅಕ್ಯುಪೆನ್ಸಿ ಸರ್ಟಿಫಿಕೇಟ್‌) ನೀಡಲಾಗಿದೆ.

* ಪ್ರತಿಯೊಬ್ಬ ಅಪಾರ್ಟ್‌ಮೆಂಟ್ ಮಾಲೀಕರಿಗೆ ಅವರ ಹೆಸರಿನಲ್ಲಿ ಖಾತೆಯನ್ನೂ ನೀಡಲಾಗಿದೆ.

* ಈ ಅಪಾರ್ಟ್‌ಮೆಂಟ್‌ಗಳಲ್ಲಿ ನಾವು ವಾಸ ಮಾಡುತ್ತಿದ್ದು, ಈ ಪ್ರದೇಶದ ಸಂಪೂರ್ಣ ಹಕ್ಕು ನಮ್ಮದೇ.

*ಈ ಕಾರಣಗಳಿಂದಾಗಿ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ರದ್ದುಪಡಿಸಬೇಕು.

‘ಬಿಲ್ಡರ್‌ಗಳು ಹೇಗೆ ಎಂಬುದು ಗೊತ್ತಿದೆ...’

ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ ಅವರು, ‘ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಮ್ಮದೇನೂ ಆಕ್ಷೇಪವಿಲ್ಲ. ಅರ್ಜಿದಾರರು ನಮ್ಮ ಬಳಿ ಬಂದರೆ ಮಾತುಕತೆ ನಡೆಸುತ್ತೇವೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೀಕ್ಷಿತ್‌ ಅವರು, ‘ಓಹ್, ಅದು ಸಾಧ್ಯವಿಲ್ಲ. ಬಿಲ್ಡರ್‌ಗಳು ಹೇಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲೊ ಒಂದಿಷ್ಟು ಒಳ್ಳೆಯ ಬಿಲ್ಡರ್‌ಗಳು ಇರಬಹುದು. ಆದರೆ, ಸಾಮಾನ್ಯ ಪ್ರಜೆಯ ಬಗೆಗಿನ ಕಾಳಜಿಯನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

* ತೋಳದ ಬಳಿಗೆ ಕುರಿಗಳನ್ನು ಕಳುಹಿಸಿ ಎಂದು ನೀವು (ಪ್ರತಿವಾದಿ ಪರ ವಕೀಲರು) ಸಲಹೆ ಕೊಡುತ್ತಿದ್ದೀರಾ, ಅದು ಆಗದು. ಅರ್ಜಿದಾರರು ಪ್ರತಿವಾದಿಗಳ ಬಳಿ ಹೋಗಕೂಡದು

-ಕೃಷ್ಣ ಎಸ್.ದೀಕ್ಷಿತ್‌, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.