ADVERTISEMENT

ಯಲಹಂಕ: ಅಪಾರ್ಟ್‌ಮೆಂಟ್‌ಗಳ ಕ್ರೀಡಾ ಉತ್ಸವ

ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶ: ಮೀನಾಕ್ಷಿ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 16:18 IST
Last Updated 13 ನವೆಂಬರ್ 2025, 16:18 IST
ಮೀನಾಕ್ಷಿ ಕೃಷ್ಣ ಬೈರೇಗೌಡ
ಮೀನಾಕ್ಷಿ ಕೃಷ್ಣ ಬೈರೇಗೌಡ   

ಯಲಹಂಕಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನ. 15 ಹಾಗೂ 16ರಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ 3ನೇ ವಾರ್ಷಿಕ ‘ಇಂಟರ್ ಅಪಾರ್ಟ್‌ಮೆಂಟ್‌ ಸ್ಪೋರ್ಟ್ಸ್ ಫೆಸ್ಟ್-2025’ ಆಯೋಜಿಸಲಾಗಿದೆ ಎಂದು ಸಂಘಟಕಿ ಮೀನಾಕ್ಷಿ ಕೃಷ್ಣ ಬೈರೇಗೌಡ ತಿಳಿಸಿದರು.

ಬ್ಯಾಟರಾಯನಪುರ ಕ್ಷೇತ್ರದ ಜನರ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು ನಾಲ್ಕು ಒಳಾಂಗಣ ಕ್ರೀಡಾಂಗಣಗಳನ್ನು ಸರ್ಕಾರ ನಿರ್ಮಿಸಿದೆ. ಮುಂಬರುವ ದಿನಗಳಲ್ಲಿ ಜಕ್ಕೂರು ಬಳಿ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈ ಬಗ್ಗೆ ನಾಗರಿಕರಿಗೆ ಮಾಹಿತಿನೀಡಲು ಹಾಗೂ ಈ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಬಳಸುವ ಉದ್ದೇಶದಿಂದ ಈ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ. ‘ಪ್ರಜಾವಾಣಿ’, ಡೆಕ್ಕನ್‌ ಹೆರಾಲ್ಡ್‌’ ಮಾಧ್ಯಮ ಸಹಯೋಗ ನೀಡಿವೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬೆಂಗಳೂರು ಉತ್ತರ ಭಾಗದಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ಜನರು ಸಮಾಜದ ಎಲ್ಲರೊಂದಿಗೆ ಬೆರೆಯುವಂತಾಗಬೇಕು. ಈ ದಿಸೆಯಲ್ಲಿ 8 ಪ್ರದೇಶಗಳಲ್ಲಿ ಕ್ರೀಡಾ ಕೂಟ ನಡೆಯಲಿದೆ. ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಚೆಸ್, ಕೇರಂ, ಟೇಬಲ್ ಟೆನಿಸ್, ಹಗ್ಗ-ಜಗ್ಗಾಟ, ಬ್ಯಾಡ್ಮಿಂಟನ್ ಸೇರಿ 14 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜಿಮ್ನಾಸ್ಟಿಕ್ ಹಾಗೂ ಪಿಕಲ್ ಬಾಲ್ ಸೇರ್ಪಡೆ ಮಾಡಿರುವುದು ಈ ಬಾರಿಯ ವಿಶೇಷ’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಸದಸ್ಯರು ಈ ಕ್ರೀಡಾ ಉತ್ಸವಕ್ಕೆ ಸಹಕಾರ ನೀಡುತ್ತಿದ್ದಾರೆ’ ಎಂದರು.

‘ಕಳೆದ ಬಾರಿ 1,500 ಜನರು ಭಾಗವಹಿಸಿದ್ದರೆ, ಈ ಬಾರಿ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ವಯೋಮಿತಿಗೆ ಅನುಗುಣವಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು. ನ.16ರಂದು ಸಂಜೆ 4ಕ್ಕೆ ವಿದ್ಯಾರಣ್ಯಪುರದ ಒಳಾಂಗಣ ಕ್ರೀಡಾಂಗಣದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ’ ಎಂದು ವಿವರಿಸಿದರು.

ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ‌ಟ್ರೋಫಿ, ನಗದು ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು. ಇಬ್ಬರು ಅದೃಷ್ಟಶಾಲಿ ವಿಜೇತರಿಗೆ ಉಚಿತವಾಗಿ ಥಾಯ್ಲೆಂಡ್‌ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.