ADVERTISEMENT

ನಂದಿನಿ ಮಳಿಗೆಗಳಲ್ಲಿ ಹಣ್ಣು, ತರಕಾರಿ: ಸಚಿವ ಸೋಮಶೇಖರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 22:06 IST
Last Updated 3 ಏಪ್ರಿಲ್ 2020, 22:06 IST
ಎಪಿಎಂಸಿಯಲ್ಲಿ ಪರಿಶೀಲನೆ ನಡೆಸಿದ ಆಹಾರ ಸಚಿವ ಕೆ.ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕೆ ಸಚಿವ ನಾರಾಯಣಗೌಡ
ಎಪಿಎಂಸಿಯಲ್ಲಿ ಪರಿಶೀಲನೆ ನಡೆಸಿದ ಆಹಾರ ಸಚಿವ ಕೆ.ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕೆ ಸಚಿವ ನಾರಾಯಣಗೌಡ   

ಬೆಂಗಳೂರು: ‘ನಂದಿನಿ ಪಾರ್ಲರ್‌ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸುವುದರ ಜತೆಗೆಅಪಾರ್ಟ್‌ಮೆಂಟ್‌ಗಳಿಗೆ ಅವುಗಳನ್ನು ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ತಿಳಿಸಿದರು.

ಬ್ಯಾಟರಾಯನಪುರ, ದಾಸನಪುರ ಕೃಷಿ ಮಾರುಕಟ್ಟೆಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ, ಆಹಾರ ಸಚಿವ ಕೆ. ಗೋಪಾಲಯ್ಯ ಮತ್ತು ತೋಟಗಾರಿಕಾ ಸಚಿವ ನಾರಾಯಣಗೌಡ ಜತೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೇಯರ್ ಕಚೇರಿಯಲ್ಲಿ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಂದಿನಿ ಪಾರ್ಲರ್‌ಗಳಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಸಂಬಂಧ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಾಗಿದೆ. ಅನುಮತಿ ನೀಡುವುದಾಗಿ ಅವರು ತಿಳಿಸಿದ್ದಾರೆ’ ಎಂದರು.

ADVERTISEMENT

ಅಪಾರ್ಟ್‌ಮೆಂಟ್‌ಗಳಿಗೆ ನೇರವಾಗಿ ಹಣ್ಣು ಮತ್ತು ತರಕಾರಿಯನ್ನು ಹಾಪ್‌ಕಾಮ್ಸ್ ಮೂಲಕ ತಲುಪಿಸಬೇಕಿದೆ. ಈ ಸಂಬಂಧ ಮೇಯರ್ ಮತ್ತು ಪಾಲಿಕೆಯ ಎಲ್ಲಾ ಸದಸ್ಯರ ಸಹಕಾರ ಕೇಳಲಾಗಿದೆ. ಮೇಯರ್ ಅವರು ಶನಿವಾರ ಹಾಪ್‌ಕಾಮ್ಸ್ ಮತ್ತು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಜತೆ ವಿಡಿಯೊ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.

ರೈತರು ಮತ್ತು ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಬಿ.ಸಿ. ಪಾಟೀಲ ಮತ್ತು ನಾರಾಯಣಗೌಡ ಹೇಳಿದರು.

ಹಣ್ಣು, ತರಕಾರಿ ಪೂರೈಕೆಗೆ ಹಾಪ್‌ಕಾಮ್ಸ್‌
ಬೆಂಗಳೂರು: ‘ರಾಜ್ಯದಲ್ಲಿರುವ 450 ಹಾ‍‍ಪ್‌ಕಾಮ್ಸ್ ಮೂಲಕ ಪ್ರತಿದಿನ 400 ರಿಂದ 450 ಟನ್‌ಗಳಷ್ಟು ಹಣ್ಣು ಮತ್ತು ತರಕಾರಿ ಸರಬರಾಜಾಗುತ್ತಿದೆ‘ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು.

‘ಬೆಂಗಳೂರಿನಲ್ಲಿ 220 ಮಳಿಗೆಗಳು ಮತ್ತು 40 ಮೊಬೈಲ್ ಘಟಕಗಳ ಮೂಲಕ ಪ್ರತಿದಿನ 120 ಟನ್ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ’ ಎಂದು ಶುಕ್ರವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಶಿವಮೊಗ್ಗದಲ್ಲಿ 28 ಟನ್, ಬೆಳಗಾವಿಯಲ್ಲಿ 40 ಟನ್ ವ್ಯಾಪಾರವಾಗಿದೆ’ ಎಂದರು.

ಶುದ್ಧ ನೀರು ಉಚಿತ
198 ವಾರ್ಡ್‌ಗಳಲ್ಲೂ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹5ಕ್ಕೆ ಸಿಗುತ್ತಿದ್ದ 20 ಲೀಟರ್ ನೀರನ್ನು ಇದೇ 21ರಿಂದ ಉಚಿತವಾಗಿ ನೀಡಲು ಚಿಂತಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.

ಈ ಪ್ರಸ್ತಾವನೆಗೆ ಮೇಯರ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.