ಬೆಂಗಳೂರು: ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ವೇತನ ಗೊಂದಲವನ್ನು ಅಧಿಕಾರಿಗಳ ಜತೆ ಚರ್ಚಿಸಿ, ಬಗೆಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದರು.
ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ಸಂಘದ ಸದಸ್ಯರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
‘ಆರೋಗ್ಯ ಕಾರ್ಯಕರ್ತೆಯರ ವೇತನ ಪಾವತಿ ಜವಾಬ್ದಾರಿ ಕುರಿತು ಚರ್ಚಿಸಲು ನಿಮ್ಮಲ್ಲಿ ಐದು ಜನರ ನಿಯೋಗದೊಂದಿಗೆ ಇನ್ನೊಮ್ಮೆ ನನ್ನನ್ನು ಭೇಟಿ ಮಾಡಿ. ನಿಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಬಗೆಹರಿಸಲಾಗುವುದು’ ಎಂದು ತಿಳಿಸಿದರು.
‘ಬಿಬಿಎಂಪಿ ಗುತ್ತಿಗೆದಾರರಿಂದ ನಿಮಗೆ ವೇತನ ಪಾವತಿ ಆಗುವುದಿಲ್ಲ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವನ್ನು (ಬಿಎಸ್‌ಡಬ್ಲ್ಯುಎಂಎಲ್) ಬೆಂಗಳೂರು ನಗರದ ಕಸ ನಿರ್ವಹಣೆಗೆಂದು ಸ್ಥಾಪಿಸಲಾಗಿದೆ. ಇದನ್ನು ಗುತ್ತಿಗೆದಾರರು ನಿರ್ವಹಣೆ ಮಾಡುವುದಿಲ್ಲ. ಇದರ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿಯೇ ಇರುತ್ತಾರೆ’ ಎಂದರು.
‘2017ರಲ್ಲಿ ಎನ್‌ಎಚ್‌ಯುಎಂ ವತಿಯಿಂದ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಂಡ ಕಾರಣಕ್ಕೆ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರನ್ನು ಘನತ್ಯಾಜ್ಯ ನಿರ್ವಹಣಾ ವಿಭಾಗಕ್ಕೆ ವರ್ಗವಣೆ ಮಾಡಲಾಯಿತು. ಈಗ ಬಿಎಸ್‌ಡಬ್ಲ್ಯುಎಂಎಲ್‌ನಿಂದ ವೇತನ ಪಾವತಿ ಎಂದು ತಿಳಿಸಿರುತ್ತಾರೆ. 30 ವರ್ಷಗಳಿಂದ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಬಿಬಿಎಂಪಿಯಿಂದಲೇ ವೇತನ ಪಾವತಿ ವ್ಯವಸ್ಥೆ ಮಾಡಬೇಕು’ ಎಂದು ಸಂಘದ ಸದಸ್ಯರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.