ADVERTISEMENT

ಅರ್ಜಿ ಸಲ್ಲಿಕೆ: ಕ್ಷೇತ್ರದ ಗುಟ್ಟು ಬಿಡದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:52 IST
Last Updated 21 ನವೆಂಬರ್ 2022, 19:52 IST
 ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಬಯಸಿ 1,450ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಪಡೆದುಕೊಂಡಿದ್ದು, ಈ ಪೈಕಿ 1,280ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರವಾಗಿ ಅವರ ಆಪ್ತರು ಅರ್ಜಿ ಸಲ್ಲಿಸಿದರು. ಆದರೆ, ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಅರ್ಜಿಯಲ್ಲಿ ಇಲ್ಲ.

ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅತೀ ಹೆಚ್ಚು 20 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಬಳ್ಳಾರಿ, ದೇವನಹಳ್ಳಿ ಕ್ಷೇತ್ರಗಳಿಗೆ ತಲಾ 17 ಅರ್ಜಿಗಳು ಸಲ್ಲಿಕೆ ಆಗಿವೆ. ಆದರೆ, ಅರಸೀಕೆರೆ ಕ್ಷೇತ್ರಕ್ಕೆ ಕೇವಲ ಒಂದು ಅರ್ಜಿ ಮಾತ್ರ ಸಲ್ಲಿಕೆ ಆಗಿದೆ. ಅಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋವರ್ಧನ್ ಮಾತ್ರ ಆಕಾಂಕ್ಷಿ. ಅರ್ಜಿ ಸಲ್ಲಿಸಿದವರಲ್ಲಿ ನಿವೃತ್ತ ನ್ಯಾಯಾಧೀಶರು, ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ವಕೀಲರು, ಉದ್ದಿಮೆದಾರರು, ಕಲಾವಿದರು, ವ್ಯಾಪಾರಿಗಳು ಇದ್ದಾರೆ.

ADVERTISEMENT

25ರಂದು ಸಭೆ: ‘ಪಕ್ಷದಿಂದ ಟಿಕೆಟ್‌ ಬಯಸಿರುವ ಆಕಾಂಕ್ಷಿಗಳ ಸಭೆ ವರ್ತೂರಿನ ಷ್ರಷ್ಠಿ ವಿಲೇಜ್‌ನಲ್ಲಿ ಇದೇ 25ರಂದು ನಡೆಯಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ‘ಸಭೆಯಲ್ಲಿ ಕೆಪಿಸಿಸಿ ಕಾರ್ಯಾ ಧ್ಯಕ್ಷರು, ಎಐಸಿಸಿಯಿಂದ ನೇಮಕಗೊಂಡಿರುವ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಆಕಾಂಕ್ಷಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತಿ ಬೂತ್‌ನ ಎಲ್ಲ ಬೂತ್‌ಮಟ್ಟದ ಏಜೆಂಟುಗಳ ಮಾಹಿತಿಯೊಂದಿಗೆ ಬರಬೇಕು’ ಎಂದೂ ಅವರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.