ADVERTISEMENT

‘ಅಭಿಜಾತ ಸಾಹಿತ್ಯ ಕಲ್ಯಾಣ ಯೋಜನೆಗೆ ಅನುದಾನ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:42 IST
Last Updated 17 ಫೆಬ್ರುವರಿ 2021, 21:42 IST
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಯುವ ಬರಗಹಾರರ ಜೊತೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಸೌಭಾಗ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಸಚಿವ ಅರವಿಂದ ಲಿಂಬಾವಳಿ, ಡಾ. ಸಿದ್ಧಲಿಂಗಯ್ಯ, ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ ಮತ್ತು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಇದ್ದಾರೆ–ಪ್ರಜಾವಾಣಿ ಚಿತ್ರ
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಯುವ ಬರಗಹಾರರ ಜೊತೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಸೌಭಾಗ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಸಚಿವ ಅರವಿಂದ ಲಿಂಬಾವಳಿ, ಡಾ. ಸಿದ್ಧಲಿಂಗಯ್ಯ, ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ ಮತ್ತು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಳೆಗನ್ನಡ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸುವ ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೋರಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವ ಬರಹಗಾರರ 58 ಚೊಚ್ಚಲ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘2 ಸಾವಿರ ವರ್ಷಗಳಷ್ಟು ಹಳೆಯದಾದ ಕನ್ನಡ ಸಾಹಿತ್ಯವನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ. ಅದನ್ನು ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿಸಲಾಗಿದೆ. ಅನುದಾನ ನೀಡಲು ಅವರೂ ಒಪ್ಪಿದ್ದಾರೆ’ ಎಂದು ಹೇಳಿದರು.

ADVERTISEMENT

‘ಪುಸ್ತಕ ಪ್ರಕಟಣೆಗೆ 144 ಕೃತಿಗಳು ಬಂದಿದ್ದವು. ಪರಿಶೀಲನಾ ಸಮಿತಿಯು ಅವುಗಳಲ್ಲಿ 58 ಕೃತಿಗಳನ್ನು ಆಯ್ಕೆ ಮಾಡಿದೆ. ಲಭ್ಯ ಇರುವ ಅನುದಾನಕ್ಕೆ ಸೀಮಿತವಾಗಿ ಪುಸ್ತಕ ಪ್ರಕಟಿಸಲಾಗಿದೆ. ಈ ಕಾರ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಯಿಂದಲೂ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವರಲ್ಲಿ ಕೋರುತ್ತೇವೆ’ ಎಂದು ಹೇಳಿದರು.

ಯುವ ಸಮೂಹ ಡಿಜಿಟಲ್ ಮಾಧ್ಯಮವನ್ನು ಹೆಚ್ಚಾಗಿ ಅವಲಂಬಿಸುತ್ತಿದೆ. ಹೀಗಾಗಿ, ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲೂ ಪ್ರಕಟಿಸುವ ಅಗತ್ಯ ಇದೆ ಎಂದರು.

ಕವಿ ಡಾ. ಸಿದ್ಧಲಿಂಗಯ್ಯ, ‘ಅಸ್ಪೃಶ್ಯತೆ ಎಂಬುದು ದಲಿತರ ಸಮಸ್ಯೆಯಲ್ಲ, ಅದೊಂದು ಸಾಮಾಜಿಕ ಸಮಸ್ಯೆ. ಅದನ್ನು ಹೋಗಲಾಡಿಸಲು ದಲಿತರು ಮಾತ್ರ ಪ್ರಯತ್ನಿಸಿದರೆ ಆಗುವುದಿಲ್ಲ. ಬೇರೆ ಸಮುದಾಯದವರೂ ಕೈಜೋಡಿಸುವ ಅಗತ್ಯವಿದೆ’ ಎಂದು ಹೇಳಿದರು.

‘ದಲಿತರ ಏಳಿಗೆಗಾಗಿ ಹಲವರು ತಮ್ಮ ಜೀವನ ಮುಡಿಪಾಗಿಟ್ಟು ಹೋರಾಟ ನಡೆಸಿದ್ದಾರೆ. ಅಂತಹ ದಲಿತೇತರರ ಬಗ್ಗೆ ಅಧ್ಯಯನಗಳನ್ನು ನಡೆಸಿ ಯುವ ಬರಹಗಾರರು ಪುಸ್ತಕಗಳನ್ನು ಪ್ರಕಟಿಸಬೇಕು. ಅದು ಉಳಿದವರಿಗೂ ಸ್ಫೂರ್ತಿಯಾಗಲಿದೆ’ ಎಂದರು.

‘ಪಂಪ, ರನ್ನರ ಆದಿಯಾಗಿ ಎಲ್ಲಾ ಕನ್ನಡ ಸಾಹಿತ್ಯವನ್ನುಬರಹಗಾರರು ಓದಬೇಕು. ನಮ್ಮದು ಕೇವಲ ಕ್ರಾಂತಿಕಾರಿ ಸಾಹಿತ್ಯ ಎಂದು ಭಾವಿಸಿಕೊಂಡು, ಅನ್ಯ ಸಾಹಿತ್ಯ ಓದದಿದ್ದರೆ ಅವರ ಸಾಹಿತ್ಯವೇ ಬಡವಾಗುತ್ತದೆ. ಸಾಹಿತ್ಯ ಪರಂಪರೆಯ ಅರಿವು ಬರಹಗಾರನಿಗೆ ಇರಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.