ADVERTISEMENT

ರಾಜ್ಯ, ಅಂತರರಾಜ್ಯದ 10 ಕಳ್ಳರ ಬಂಧನ

59 ವಿವಿಧ ಪ್ರಕರಣ ಭೇದಿಸಿದ ಆಗ್ನೇಯ ವಿಭಾಗದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:41 IST
Last Updated 3 ಜುಲೈ 2019, 20:41 IST

ಬೆಂಗಳೂರು: ರಾಜ್ಯ ಮತ್ತು ಅಂತರರಾಜ್ಯದ 10 ಮಂದಿ ಕಳ್ಳರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು, 59 ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿ ₹2.50 ಲಕ್ಷ ನಗದು, ₹1.68 ಕೋಟಿ ಮೌಲ್ಯದ 800 ಗ್ರಾಂ ಚಿನ್ನಾಭರಣ, 49 ದ್ವಿಚಕ್ರ ವಾಹನಗಳು ಮತ್ತು 15 ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ADVERTISEMENT

ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮಾರುತಿ ಕಂಪನಿ ಕಾರುಗಳನ್ನು ಮಾತ್ರ ಕಳವು ಮಾಡುತ್ತಿದ್ದ ಚೆನ್ನೈನ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಾರು ಕಳವು ಪ್ರಕರಣ ಬೆನ್ನತ್ತಿದಾಗ ಈ ಕೃತ್ಯ ಬಯಲಾಗಿದೆ ಎಂದು ಕಮಿಷನರ್‌ ತಿಳಿಸಿದರು.

ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ (29) ಮತ್ತು ಬಾಬು (30) ಬಂಧಿತರು. ಆರೋಪಿಗಳಿಂದ ಒಂಬತ್ತು ಸ್ವಿಫ್ಟ್, ನಾಲ್ಕು ಸ್ವಿಫ್ಟ್ ಡಿಸೈರ್ ಮತ್ತು ಎರಡು ಎರ್ಟಿಗಾ ಕಾರು ಸೇರಿ 15 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಮೆಕಾನಿಕ್‍ಗಳಾಗಿ ಕೆಲಸ ಮಾಡು
ತ್ತಿದ್ದ ಆರೋಪಿಗಳು ಟ್ಯಾಬ್ ತಂತ್ರಜ್ಞಾನದ ಮೂಲಕ ಕಾರುಗಳ ಬಾಗಿಲು ತೆಗೆಯುವುದನ್ನು ಕರಗತ ಮಾಡಿಕೊಂಡಿದ್ದರು. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ರಾತ್ರಿ ಹೊತ್ತು ನಿಂತಿದ್ದ ಮಾರುತಿ ಕಂಪನಿಯ ಕಾರುಗಳನ್ನು ಗುರುತಿಸುತ್ತಿದ್ದರು. ಬಾಗಿಲಿನ ಬಿಡ್ಡಿಂಗ್‍ ಬಿಚ್ಚಿ, ಗ್ಲಾಸ್ ತೆರೆದ ಬಳಿಕ ಟ್ಯಾಬ್‍ನಲ್ಲಿರುವ ಆ್ಯಪ್ ಮೂಲಕ ಕೇಬಲ್ ಅಳವಡಿಸಿ ಕಾರುಗಳನ್ನು ಸ್ಟಾರ್ಟ್ ಮಾಡಿ
ಕೊಂಡು ತಮಿಳುನಾಡಿಗೆ ಕೊಂಡೊಯ್ದು ಕಡಿಮೆ ಬೆಲೆಗೆ ಮಾರುತ್ತಿದ್ದರು ಎಂದೂ ಅವರು ಹೇಳಿದರು.

ಬಸ್‍ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದ ತಮಿಳುನಾಡಿನ ಜೋಲಾರಪೇಟೆಯ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಶಬರಿ (38), ಬಾಲಾಜಿ(49), ಜ್ಯೋತಿ (44) ಮತ್ತು ಸುಭಾಸ್ (20) ಬಂಧಿತರು. ಪ್ರಯಾಣಿಕರಂತೆ ನಟಿಸುವ ಆರೋಪಿಗಳು ಬ್ಯಾಗ್‍ಗಳನ್ನು ಕೊಂಡೊಯ್ಯುವ ಸಹ ಪ್ರಯಾಣಿಕರ ಜತೆ ಬಸ್ ಹತ್ತುತ್ತಿದ್ದರು. ಬಸ್‌ ಸ್ವಲ್ಪ ದೂರ ಹೋಗುತ್ತಿದ್ದಂತೆ ನಿರ್ದಿಷ್ಟ ಪ್ರಯಾಣಿಕರ ಪಕ್ಕದಲ್ಲಿ ಆರೋಪಿ ಮಹಿಳೆ
ಯರು ಕುಳಿತುಕೊಳ್ಳುತ್ತಿದ್ದರು. ಇತರೆ ಆರೋಪಿಗಳು ಪಕ್ಕದಲ್ಲೇ ನಿಂತುಕೊಳ್ಳುತ್ತಿದ್ದರು.

ನಂತರ ಸೀಟಿನ ಕೆಳಗೆ ಚಿಲ್ಲರೆ ಹಣ ಹಾಕುತ್ತಿದ್ದರು. ಆ ಬಳಿಕ, ನಿರ್ದಿಷ್ಟ ಪ್ರಯಾಣಿಕರಿಗೆ ಹಣ ತೆಗೆದುಕೊಡು
ವಂತೆ ಕೇಳುತ್ತಿದ್ದರು. ಆತ ಕೆಳಗೆ ಬಗ್ಗುತ್ತಿದ್ದಂತೆ, ಪಕ್ಕದಲ್ಲೇ ಇದ್ದ ಇತರೆ ಆರೋಪಿಗಳು ಆ ಬ್ಯಾಗ್‍ನ ಒಳಗಿದ್ದ ಚಿನ್ನಾಭರಣ ಮತ್ತು ಹಣ ಕಳವು ಮಾಡಿ ಮುಂದಿನ ನಿಲ್ದಾಣಗಳಲ್ಲಿ ಇಳಿದು ಪರಾರಿಯಾಗುತ್ತಿದ್ದರು. ವಿಶೇಷ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್‍ಸ್ಪೆಕ್ಟರ್ ಎಂ. ಮಲ್ಲೇಶ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ₹28 ಲಕ್ಷ ಮೌಲ್ಯದ ಚಿನ್ನಾಭರಣ, ₹2.50 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಜೋಸಿನ್ ಟಿಟೋಸ್ (20), ಸಿಮ್‍ಜಿತ್ ಶಶಿಕುಮಾರ್ (22) ಮತ್ತು ತಮಿಳುನಾಡಿನ ಸೆಲ್ವರಾಜ್ (30) ಬಂಧಿತರು. ಅವರಿಂದ ₹15 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿವಾಳ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿದ್ದ 20 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಐಷಾರಾಮಿ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಜಂಟಿ ಕಾರ್ಯಾಚರಣೆ ನಡೆಸಿದ ಆಡುಗೋಡಿ ಮತ್ತು ಪರಪ್ಪನ ಅಗ್ರಹಾರ ಪೊಲೀಸರು, ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ದೀಪಕ್ (18), ಸುಹೇಲ್ (23) ಮತ್ತು ಇನ್ನೂ ಪ್ರೌಢಾವಸ್ಥೆ ತಲುಪದ ಮತ್ತೊಬ್ಬ ಬಂಧಿತರು. ಇವರಿಂದ ₹25 ಲಕ್ಷ ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.