ಬಂಧನ
ಬೆಂಗಳೂರು: ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ ಪರಿಶೀಲನೆಗೆ ತೆರಳಿದ್ದ ವೇಳೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಇಬ್ಬರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ನಗರ ನಿವಾಸಿ ಮೋನಿಷ್(28) ಮತ್ತು ಬಾಪೂಜಿನಗರ ನಿವಾಸಿ ವಿಶಾಲ್(28) ಬಂಧಿತರು.
ಸೆ.19ರ ರಾತ್ರಿ ಚಂದ್ರಾಲೇಔಟ್ ವೆಸ್ಟ್ ವ್ಯೂ ಎಂಬ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಪರಿಶೀಲನೆಗೆ ತೆರಳಿದ್ದ ವೇಳೆ ಪಿಎಸ್‌ಐ ರವೀಶ್ ಮತ್ತು ಕಾನ್‌ಸ್ಟೆಬಲ್ ಸಿದ್ದಪ್ಪಗೌಡ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಆರೋಪಿಗಳ ಪೈಕಿ ಮೋನಿಷ್ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವಿಶಾಲ್ ರಾಜಾಜಿನಗರದಲ್ಲಿ ಇರುವ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ರೌಡಿಶೀಟರ್‌ಗಳ ಮನೆಗಳ ಮೇಲೆ ಶುಕ್ರವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದರು. ಅದೇ ವೇಳೆ ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳಲ್ಲಿ ಪರಿಶೀಲನೆಯನ್ನೂ ನಡೆಸಲಾಗುತ್ತಿತ್ತು. ವೆಸ್ಟ್ ವ್ಯೂ ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ ಪಿಎಸ್‌ಐಗಳಾದ ರವೀಶ್, ಶ್ರೀಕಂಠಯ್ಯ, ಹೆಡ್ ಕಾನ್‌ಸ್ಟೆಬಲ್ ವಿನೋದ್ ಹಾಗೂ ಕಾನ್‌ಸ್ಟೆಬಲ್ ಸಿದ್ದಪ್ಪಗೌಡ ಅವರು ಪರಿಶೀಲನೆಗೆ ತೆರಳಿದ್ದರು. ಸಿದ್ದಪ್ಪಗೌಡ ಅವರು ಬಾರ್ ಒಳಗಿನ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಆಗ ಟೇಬಲ್ ಬಳಿ ಕುಳಿತು ಮದ್ಯ ಸೇವಿಸುತ್ತಿದ್ದ ಆರೋಪಿಗಳು, ವಿಡಿಯೊ ಮಾಡುತ್ತಿದ್ದನ್ನು ಪ್ರಶ್ನಿದ್ದರು.
ಸ್ಥಳದಲ್ಲಿದ್ದ ಪಿಎಸ್‌ಐ ರವೀಶ್ ಅವರು ‘ಇದು ನಿತ್ಯದ ವಿಶೇಷ ಕಾರ್ಯಾಚರಣೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನೀವು ಆರಾಮಾಗಿ ಮದ್ಯ ಸೇವಿಸಿ’ ಎಂದು ಹೇಳಿದ್ದರು. ಆರೋಪಿಗಳ ಕೋಪ ತಣಿಯದೇ ಸಿದ್ದಪ್ಪಗೌಡ ಅವರ ಬಳಿಯಿದ್ದ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ. ಅದನ್ನು ಪ್ರಶ್ನಿಸಿದ ರವೀಶ್ ಅವರ ಮೇಲೂ ಹಲ್ಲೆ ನಡೆಸಿ, ಸಮವಸ್ತ್ರ ಹಿಡಿದು ಎಳೆದಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.