
ಯಲಹಂಕ: ಅರಿವು ಕೇಂದ್ರಗಳು ಕೇವಲ ಮೇಲ್ನೋಟದ ಕಟ್ಟಡಗಳಾಗಿರದೆ, ಮಕ್ಕಳ ಭವಿಷ್ಯ ರೂಪಿಸುವ ಜ್ಞಾನ ಕೇಂದ್ರಗಳಾಗಿ ಪರಿವರ್ತನೆಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮದಲ್ಲಿ ಅರಿವು ಕೇಂದ್ರ, ಸ್ತ್ರೀ ಶಕ್ತಿ ಭವನ, ನಮ್ಮ ಮೆಡಿಕಲ್, ನಮ್ಮ ಕ್ಲಿನಿಕ್ ಮತ್ತು ಬಸ್ ತಂಗುದಾಣ ಸೌಲಭ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಗ್ರಂಥಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಕೇಂದ್ರಗಳನ್ನು ನಮ್ಮ ಸರ್ಕಾರ ‘ಅರಿವು ಕೇಂದ್ರ’ ಎಂಬ ಹೆಸರಿನೊಂದಿಗೆ ಹೊಸ ಪರಿಕಲ್ಪನೆ ಮತ್ತು ಆಧುನಿಕ ಶೈಲಿಯಲ್ಲಿ ರೂಪಿಸುತ್ತಿದ್ದು, ಯುವ ಸಮುದಾಯದ ಜ್ಞಾನವೃದ್ಧಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಈ ಕೇಂದ್ರಗಳಲ್ಲಿ ಕಲ್ಪಿಸಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ 5,770 ಅರಿವು ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ರಾಜ್ಯದ 51 ಲಕ್ಷ ಯುವಕರು ಈ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಇದರ ಸದುಪಯೋಗದ ಮೂಲಕ ಸರ್ಕಾರಿ ಕೆಲಸ ಪಡೆದಿರುವ ಹಲವು ಉದಾಹರಣೆಗಳಿವೆ’ ಎಂದು ತಿಳಿಸಿದರು.
ದೊಡ್ಡಜಾಲ ಗ್ರಾಮ ಪಂಚಾಯಿತಿ ರಾಜ್ಯದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ಗ್ರಾಮ ಪಂಚಾಯಿತಿಗಳ ಪಟ್ಟಿಯಲ್ಲಿದೆ. ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿರುವ ಈ ಪಂಚಾಯಿತಿಗೆ ₹1 ಕೋಟಿ ವಿಶೇಷ ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಜ್ಞಾನಕ್ಕೆ ಎಲ್ಲಾ ರೀತಿಯ ಉತ್ತಮ ಅವಕಾಶಗಳ ಬಾಗಿಲು ತೆರೆಯುವ ಶಕ್ತಿಯಿದೆ’ ಎಂದರು.
ದೊಡ್ಡಜಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಬೈರೇಗೌಡ, ಉಪಾಧ್ಯಕ್ಷೆ ಗೌರಮ್ಮ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಅರುಂಧತಿ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ನೋಮೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಮಧು, ಪಿಡಿಒ ವೆಂಕಟರಂಗನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.