ADVERTISEMENT

8 ಮಂದಿ ಬಂಧನ: ಚಿನ್ನದ ಬಿಸ್ಕತ್‌ ವಶ

ಅಕ್ರಮ ಬಾಂಗ್ಲಾ ವಲಸಿಗರೆಂಬ ಶಂಕೆ: ಬೆಂಗಳೂರು ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 18:54 IST
Last Updated 9 ನವೆಂಬರ್ 2019, 18:54 IST

ರಾಮನಗರ: ಇಲ್ಲಿನ ಐಜೂರು ಬಡಾವಣೆಯ ಮಸೀದಿ ಹಿಂಭಾಗ ವಾಸವಿದ್ದ 8 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ಬಂಧಿತರಲ್ಲಿ 6 ಪುರುಷರು, ಇಬ್ಬರು ಮಹಿಳೆಯರು ಸೇರಿದ್ದಾರೆ. ಬೆಂಗಳೂರು ನಗರದ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣ ವೊಂದಕ್ಕೆ ಸಂಬಂಧಿಸಿ ಇನ್‌ಸ್ಪೆಕ್ಟರ್‌ ಅರುಣ್ ನೇತೃತ್ವದ ತಂಡವು ರಾಮನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಿತು. ಈ ಸಂದರ್ಭ ಅವರ ಬಳಿ 700 ಗ್ರಾಂ ಚಿನ್ನದ ಬಿಸ್ಕತ್‌, ಡ್ರ್ಯಾಗರ್‌, ಲಾಂಗ್‌, ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಆರೋಪಿಗಳು ಬಾಂಗ್ಲಾ ಮೂಲದವರು ಇರಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ.

ಮನೆ ಮಾಲೀಕನ ವಿಚಾರಣೆ: ಆರೋಪಿಗಳು ಮೂರು ದಿನಗಳ ಹಿಂದಷ್ಟೇ ಐಜೂರಿನಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ಈ ಸಂದರ್ಭ ಯಾವುದೇ ವಿಳಾಸ ಧೃಡೀಕರಣ ದಾಖಲಾತಿ ನೀಡರಲಿಲ್ಲ. ಹೀಗಾಗಿ ಮನೆ ಮಾಲೀಕ ಹಾಗೂ ಮನೆಯನ್ನು ಬಾಡಿಗೆಗೆ ನೀಡಿದ್ದ ಆಟೊ ಚಾಲಕನೊಬ್ಬನನ್ನು ಇಲ್ಲಿನ ಐಜೂರು ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೇಗೆ ಪರಿಚಯವಾಯಿತು? ದಾಖಲೆ ಇಲ್ಲದೇ ಹೇಗೆ ಬಾಡಿಗೆಗೆ ನೀಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಬಾಡಿಗೆ ಕೊಡುವ ಮುನ್ನ ಎಚ್ಚರ
ರಾಮನಗರದಲ್ಲಿ ಈಚೆಗೆ ಇಬ್ಬರು ಉಗ್ರರ ಬಂಧನದ ಹಿನ್ನೆಲೆಯಲ್ಲಿ ಅಪರಿಚಿತರಿಗೆ ಮನೆ ಬಾಡಿಗೆ ಕೊಡುವ ಮುನ್ನ ಎಚ್ಚರ ವಹಿಸುವಂತೆ ಪೊಲೀಸರು ಆಗಾಗ್ಗೆ ಎಚ್ಚರಿಸುತ್ತಲೇ ಬಂದಿದ್ದಾರೆ.

ಐಜೂರಿನಲ್ಲಿ ಬಂಧಿತರಾದ ಎಂಟು ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಎನ್ನಲಾಗಿದ್ದು, ಈ ಬಗ್ಗೆ ತನಿಖೆ ನಡೆದಿದೆ. ಮನೆ ಕೊಟ್ಟಿದ್ದಕ್ಕೆ ಇದೀಗ ಮಾಲೀಕ ಠಾಣೆ ಮೆಟ್ಟಿಲು ಏರುವಂತಾಗಿದೆ. ಮನೆ ಬಾಡಿಗೆ ನೀಡುವ ಮುನ್ನ ಎಚ್ಚರ ವಹಿಸುವಂತೆ ಪೊಲೀಸರು ಮತ್ತೊಮ್ಮೆ ಮನವಿ ಮಾಡಿದ್ದಾರೆ.

**

ಬೆಂಗಳೂರು ಪೊಲೀಸರು ರಾಮನಗರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಅವರಿಗೆ ಮನೆ ನೀಡಿದ ಮಾಲೀಕ, ಮಧ್ಯವರ್ತಿಯನ್ನು ವಿಚಾರಣೆ ನಡೆಸಲಾಗಿದೆ
-ಅನೂಪ್ ಶೆಟ್ಟಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.