ಕಳ್ಳತನ
ಬೆಂಗಳೂರು: ಚಿನ್ನಾಭರಣ ಅಂಗಡಿಯ ಕೆಲಸಗಾರರನ್ನು ಬೆದರಿಸಿ ಚಿನ್ನಾಭರಣ ದೋಚಿದ್ದ ರಾಜಸ್ಥಾನದ ಐವರನ್ನು ಕೆ.ಆರ್. ಪುರ ಠಾಣೆಯ ಪೊಲೀಸರು ಬಂಧಿಸಿ, ಅವರಿಂದ 50 ಲಕ್ಷ ಮೌಲ್ಯದ 478 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಮಹೀಂದ್ರ ಗೆಹಲೋತ್, ಕೀರ್ತರಾಮ್, ಪುಷ್ಪೇಂದ್ರ ಸಿಂಗ್, ನಾರಾಯಣ್ ಲಾಲ್ ಬಂಧಿತರು.
ಕೆ.ಆರ್. ಪುರ ಮುಖ್ಯರಸ್ತೆಯ ಚಿನ್ನಾಭರಣ ಅಂಗಡಿಗೆ ಮೇ 9ರಂದು ಆರೋಪಿಗಳು ನುಗ್ಗಿ ಕೆಲಸಗಾರರಿಗೆ ಚಾಕು ತೋರಿಸಿ 600 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದೋಚಿ ಪರಾರಿ ಆಗಿದ್ದರು. ಅಂಗಡಿ ಮಾಲೀಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
‘ಅಂದು ಮಧ್ಯಾಹ್ನ ಅಂಗಡಿ ಮಾಲೀಕರು ಊಟಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಕೆಲಸಗಾರರು ಮಾತ್ರ ಅಂಗಡಿಯಲ್ಲಿ ಇದ್ದರು. ಆಗ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.
‘ರಾಜಸ್ಥಾನ ಜೋಧಪುರ ಜಿಲ್ಲೆಯು ಬೋರುಂಡ ಗ್ರಾಮದಲ್ಲಿ ಪ್ರಮುಖ ಆರೋಪಿ ಮಹೀಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆತ ನೀಡಿದ ಸುಳಿವು ಆಧರಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಮೂಡಲಪಾಳ್ಯದಲ್ಲಿ ಇಬ್ಬರು ಹಾಗೂ ರಾಜಸ್ಥಾನದ ಪಾಲಿ ಜಿಲ್ಲೆಯ ಡೋಲಾಕ ಗ್ರಾಮದಲ್ಲಿ ಮತ್ತಿಬ್ಬರನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.