ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಾರ್ಡನ್ ಸಿಟಿ ಕಾಲೇಜು ಬಳಿಯ ರಸ್ತೆಯೊಂದರಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ನೈಜೀರಿಯಾದ ಪ್ರಜೆಗಳಾದ ಎಸ್ಸೊ ಜರ್ಮನ್ ಮತ್ತು ಜಾನ್ ಚುಕುವಾ ಬಂಧಿತರು.
ಬಂಧಿತರಿಂದ ₹17 ಲಕ್ಷ ಮೌಲ್ಯದ 108 ಗ್ರಾಂ ಬಿಳಿ ಬಣ್ಣದ ಎಂ.ಡಿ.ಎಂ.ಎ ಕ್ರಿಸ್ಟಲ್, ಎರಡು ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಮಂಗಳವಾರ ತಿಳಿಸಿದರು.
‘ಇಬ್ಬರೂ ಡ್ರಗ್ಸ್ ಪೆಡ್ಲರ್‌ಗಳು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಐದು ವರ್ಷಗಳಿಂದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲಸಿದ್ದರು. ಇಬ್ಬರೂ ಮೋಜಿನ ಜೀವನ ನಡೆಸುವ ಉದ್ದೇಶದಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸಲು ಡ್ರಗ್ಸ್ ಮಾರಾಟ ದಂಧೆಗೆ ಇಳಿದಿದ್ದರು. ದೆಹಲಿಯಲ್ಲಿ ನೆಲಸಿದ್ದ ತಮ್ಮ ಸ್ನೇಹಿತರ ಮೂಲಕ ಕಡಿಮೆ ಮೊತ್ತಕ್ಕೆ ಮಾದಕ ವಸ್ತುಗಳನ್ನು ಖರೀದಿಸಿ, ನಗರಕ್ಕೆ ತರುತ್ತಿದ್ದರು. ಅದನ್ನು ನಗರದಲ್ಲಿ ಪರಿಚಿತ ಗ್ರಾಹಕರು, ಸಾಫ್ಟ್‌ವೇರ್ ಎಂಜಿನಿಯರ್, ಕಾಲೇಜು ವಿದ್ಯಾರ್ಥಿಗಳು ಹಾಗೂ ಪೇಯಿಂಗ್ ಗೆಸ್ಟ್‌ನಲ್ಲಿ ನೆಲಸಿದ್ದವರಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುತ್ತಿದ್ದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.