ಬೆಂಗಳೂರು: ಸಮುದಾಯ ಕರ್ನಾಟಕ ಸಂಘಟನೆಯು ‘ಸಮುದಾಯ 50’ರ ಸಂಭ್ರಮದ ಪ್ರಯುಕ್ತ ‘ಮನುಷ್ಯತ್ವದೆಡೆಗೆ ಸಮುದಾಯ 50’ ಶೀರ್ಷಿಕೆಯಡಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಶನಿವಾರ ಚಾಲನೆ ದೊರೆಯಿತು.
ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ಉದ್ಘಾಟಿಸಿದರು. ‘ಸಮುದಾಯ 50’ರ ಭಾಗವಾಗಿ ಇದೇ ಆಗಸ್ಟ್‌ನಲ್ಲಿ ಹಮ್ಮಿಕೊಂಡಿದ್ದ ಕಲಾ ಶಿಬಿರದಲ್ಲಿ ರಚಿಸಲಾದ 31 ಕಲಾವಿದರ 31 ಕಲಾಕೃತಿಗಳನ್ನು ಸೋಮವಾರದವರೆಗೆ ನಡೆಯುವ ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಲಾಗಿದೆ.
ಅಕ್ರೆಲಿಕ್ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದು, ದಬ್ಬಾಳಿಕೆ, ದೌರ್ಜನ್ಯಗಳನ್ನು ಬಿಂಬಿಸುವ ಕಲಾಕೃತಿಗಳ ಜತೆಗೆ ಸೌಹಾರ್ದ, ಸಂವಿಧಾನದ ಆಶಯ ಸಾರುವ ವರ್ಣಚಿತ್ರಗಳಿವೆ. 2 ಅಡಿ x2.5 ಅಡಿ ಅಳತೆಯ ಕಲಾಕೃತಿಗಳು ಪ್ರದರ್ಶನದಲ್ಲಿದ್ದು, ಅವುಗಳಿಗೆ ತಲಾ ₹10 ಸಾವಿರ ನಿಗದಿಪಡಿಸಲಾಗಿದೆ.
‘ಮಾನವ ಸಂವೇದನೆಯೆಂಬುದು ಜಾತಿ, ಮತ, ಲಿಂಗ, ವಯಸ್ಸುಗಳನ್ನು ಮೀರಿದ ಸಂವೇದನೆ. ದೌರ್ಜನ್ಯ, ಅನ್ಯಾಯ, ಅವಮಾನ, ಆಘಾತ ಯಾರಿಗೇ ಸಂಭವಿಸಿದರೂ ಮನುಷ್ಯತ್ವ ಇರುವವರು ನೊಂದುಕೊಳ್ಳುತ್ತಾರೆ. ಬಂಧನ, ಹಿಂಸೆ, ಹಸಿವು ಇರದ ಸೌಹಾರ್ದ ಸಹೋದರತೆಯ ವಾತಾವರಣ ಬಯಸುವುದು ಮನುಷ್ಯರ ಗುಣ’ ಎಂದು ‘ಸಮುದಾಯ 50’ರ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.
ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಚಿಕ್ಕಮಗಳೂರು, ‘ಸಮುದಾಯ 50ರ ಭಾಗವಾಗಿ ವರ್ಷ ಪೂರ್ತಿ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ನಾಟಕೋತ್ಸವ, ಬೀದಿ ನಾಟಕೋತ್ಸವ, ವಿಚಾರಸಂಕಿರಣಗಳನ್ನೂ ನಡೆಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.