ಬೆಂಗಳೂರು: ಹೃದಯ ವೈಫಲ್ಯಕ್ಕೆ ಒಳಗಾಗಿದ್ದ ಉತ್ತರ ಕರ್ನಾಟಕದ ಇಬ್ಬರು ರೋಗಿಗಳಿಗೆ ರಾಜರಾಜೇಶ್ವರಿನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕೃತಕ ಹೃದಯ ಕಸಿ ನಡೆಸಲಾಗಿದೆ.
ಈ ಬಗ್ಗೆ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಕ ಡಾ.ಅಶ್ವಿನ್, ‘ಗುರಪ್ಪ ಗೋಣಿ ಹಾಗೂ ಗುರುಲಿಂಗಪ್ಪ ಕಲ್ಯಾಣಶೆಟ್ಟಿ ಎಂಬುವರಿಗೆ ಕೃತಕ ಹೃದಯ ಕಸಿ ಮಾಡಲಾಗಿದೆ. ‘ಮೆಗ್ಲೆವ್ ಫ್ಲೊ’ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಹೃದಯದ ಎಡ ಹೃತ್ಕರ್ಣಕ್ಕೆ ‘ಹಾರ್ಟ್‌ಮೇಟ್ 3’ ಉಪಕರಣ ಅಳವಡಿಸಲಾಗಿದೆ. ಇದು ಅತ್ಯಂತ ಸಂಕೀರ್ಣ ಹಾಗೂ ಅಪರೂಪದ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ’ ಎಂದು ಹೇಳಿದರು.
‘ಇಬ್ಬರು ರೋಗಿಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದೊತ್ತಡ ನಿಯಂತ್ರಿಸಲು ಬಲೂನ್ ಪಂಪ್ ಅಳವಡಿಸಿದರೂ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಇಬ್ಬರಿಗೂ ಕೂಡಲೇ ಹೃದಯ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಇವರಿಗೆ ಹೊಂದಾಣಿಕೆಯಾಗುವ ಹೃದಯ ಸಿಗಲಿಲ್ಲ. ಕೂಡಲೇ ಅವರಿಗೆ ಹೃದಯ ಕಸಿ ಮಾಡದೇ ಹೋದಲ್ಲಿ ಜೀವಕ್ಕೆ ಅಪಾಯವಿತ್ತು. ಈ ಇಬ್ಬರು ರೋಗಿಗಳ ಹೃದಯ ಸ್ನಾಯುಗಳು ಸಂಪೂರ್ಣ ನಿರ್ಜೀವವಾಗಿದ್ದವು. ಹೀಗಾಗಿ ಅವರಿಗೆ ಕೃತಕ ಹೃದಯ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು’ ಎಂದು ವಿವರಿಸಿದರು.
ಸ್ಪರ್ಶ್ ಆಸ್ಪತ್ರೆ ಆರ್.ಆರ್.ನಗರ ಶಾಖೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಾಹುಲ್ ತಿವಾರಿ, ‘ಇತ್ತೀಚೆಗೆ ಅಂಗಾಂಗ ದಾನಿಗಳ ಸಂಖ್ಯೆಗಿಂತಲೂ ಅಂಗಾಂಗ ಅಗತ್ಯತೆ ಇರುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂಗಾಂಗ ವೈಫಲ್ಯ ಎದುರಿಸುತ್ತಿರುವವರಿಗೆ ಕೃತಕ ಅಂಗಾಂಗ ಕಸಿ ಭರವಸೆಯ ಬೆಳಕಾಗಿದೆ. ಹೃದಯದ ಸ್ನಾಯು ಸಂಪೂರ್ಣ ನಿಷ್ಕ್ರಿಯವಾದ ಬಳಿಕವಷ್ಟೇ ಈ ಕೃತಕ ಹೃದಯ ಕಸಿ ಮಾಡಲಾಗುತ್ತದೆ’ ಎಂದರು.
‘ಬ್ಯಾಟರಿ ಜೋಡಣೆ’
‘ಕೃತಕ ಹೃದಯವು ಸಾಮಾನ್ಯ ಹೃದಯದಂತೆಯೇ ಕಾರ್ಯ ನಿರ್ವಹಿಸಲಿದೆ. ನಿರ್ಜೀವ ಹೃದಯದ ಒಳಗಡೆ ಮಷಿನ್ ಅಳವಡಿಸಿ ಪೈಪ್ ಮೂಲಕ ಹೊರಗಡೆಗೆ ಬ್ಯಾಟರಿ ಜೋಡಿಸಲಾಗುತ್ತದೆ. ಈ ಬ್ಯಾಟರಿ 18ರಿಂದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು ಬಳಿಕ ಬ್ಯಾಟರಿಯನ್ನು ಚಾರ್ಜ್ ಮಾಡಬೇಕಾಗುತ್ತದೆ. ಬ್ಯಾಟರಿ ಚಾರ್ಜ್ ತೀರಾ ಕಡಿಮೆಯಾದಾಗ ಎಚ್ಚರಿಕೆಯ ಗಂಟೆ ಬರಲಿದೆ. ಆಗ ಕೂಡಲೇ ಬ್ಯಾಟರಿ ಬದಲಿಸಬೇಕಾಗುತ್ತದೆ. 8 ಬ್ಯಾಟರಿಗಳನ್ನು ರೋಗಿಗಳಿಗೆ ನೀಡಲಾಗಿರುತ್ತದೆ. ಈ ಬ್ಯಾಟರಿಗಳು ಜಲನಿರೋಧಕ ಆಗಿರಲಿವೆ. ರೋಗಿ ಎಲ್ಲಿಯೇ ತೆರಳಿದರೂ ಬ್ಯಾಟರಿ ಬ್ಯಾಗ್ ಜೊತೆಗಿರಬೇಕಾಗುತ್ತದೆ’ ಎಂದು ಡಾ.ಅಶ್ವಿನ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.