ADVERTISEMENT

ಎಐ ನಿಯಂತ್ರಿಸುವವರು ಯಾರು?: ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 18:47 IST
Last Updated 8 ಆಗಸ್ಟ್ 2025, 18:47 IST
ಲಕ್ಷ್ಮಿ ಚಂದ್ರಶೇಖರ್ ಅವರು ‘ಸಿಂಗಾರವ್ವ’ ಏಕವ್ಯಕ್ತಿ ಪ್ರದರ್ಶನ ಪ್ರಸ್ತುತಪಡಿಸಿದರು
ಲಕ್ಷ್ಮಿ ಚಂದ್ರಶೇಖರ್ ಅವರು ‘ಸಿಂಗಾರವ್ವ’ ಏಕವ್ಯಕ್ತಿ ಪ್ರದರ್ಶನ ಪ್ರಸ್ತುತಪಡಿಸಿದರು   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಉದ್ಯೋಗವನ್ನು ಕಸಿದು ಕೊಳ್ಳಲಿದೆಯೇ, ಈ ತಂತ್ರಜ್ಞಾನ ನಮ್ಮನ್ನು ನಿಯಂತ್ರಿಸುತ್ತಿದ್ದೆಯೇ ಎಂಬ ಕಳವಳ ಒಂದೆಡೆಯಾದರೆ, ಸಿನಿಮಾ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ಸುಲಭಗೊಳಿಸಿರುವ ಬಗ್ಗೆ ಮೆಚ್ಚುಗೆ. 

ಹೀಗೆ ಎಐ ಬಳಕೆಯ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಚರ್ಚೆಗೆ ವೇದಿಕೆಯಾದದ್ದು ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ‘ಎಐಯ ಅನಾವರಣ: ಸಾಧನ, ಮಾಯಾವಿ, ಸರ್ವಾಧಿಕಾರಿ’ ಗೋಷ್ಠಿ. 

ADVERTISEMENT

ಎಐ ನಿಯಂತ್ರಿಸುವವರು ಯಾರೆಂಬ ಪ್ರಶ್ನೆಯೊಂದಿಗೆ ಆರಂಭವಾದ ಈ ಚರ್ಚೆಯಲ್ಲಿ, ಈ ತಂತ್ರಜ್ಞಾನದ ಅತಿಯಾದ ಅವಲಂಬನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಕಾಶಕಿ ಶ್ರೀಜಾ ವಿ.ಎನ್., ‘ಎಐ ಬಳಕೆಗೆ ಸಂಬಂಧಿಸಿದಂತೆ ಪ್ರಾರಂಭಿಕ ಹಂತ ಮೀರಿ ಮುಂದೆ ಬಂದಿದ್ದೇವೆ. ಎಐ ಅನ್ನು ನಾವು ತರಬೇತಿ ಮಾಡುತ್ತಿದ್ದೇವೆಯೇ ಅಥವಾ ನಮ್ಮನ್ನೇ ಎಐ ತರಬೇತಿ ಮಾಡುತ್ತಿದೆಯೇ ಎಂಬ ಜಿಜ್ಞಾಸೆಯಿದೆ. ಈ ತಂತ್ರಜ್ಞಾನ ಬಳಕೆಯಲ್ಲಿ ನಾವು ನಿಪುಣರಾದರೆ ಮಾತ್ರ ನಮ್ಮನ್ನು ನಿಯಂತ್ರಿಸಲು ಎಐಗೆ ಸಾಧ್ಯವಾಗುವುದಿಲ್ಲ. ಈ ತಂತ್ರಜ್ಞಾನವನ್ನೇ ಅನುಸರಿಸುತ್ತಾ ಹೋದರೆ ವಿಚಾರ ಮಾಡಬೇಕಾದ ಸಂಗತಿ’ ಎಂದು ಅಭಿಪ್ರಾಯಪಟ್ಟರು.

ಈ ತಂತ್ರಜ್ಞಾನದ ಅನುಕೂಲದ ಬಗ್ಗೆ ವಿವರಿಸಿದ ಚಲನಚಿತ್ರ ನಿರ್ದೇಶಕ ಹೇಮಂತ್ ರಾವ್, ‘ಎಐ ಸಿನಿಮಾ ಚಿತ್ರೀಕರಣವನ್ನು ಸುಲಭ ಮಾಡಿದ್ದು, ಯಾರು ಬೇಕಾದರೂ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿದೆ. ಘಟನೆಗಳನ್ನು ಮರು ಸೃಷ್ಟಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಈ ಹಿಂದೆ ದೃಶ್ಯಕ್ಕೆ ಅನುಗುಣವಾಗಿ ಆನೆ ಸೇರಿ ವಿವಿಧ ಪ್ರಾಣಿಗಳನ್ನು ಚಿತ್ರೀಕರಣದ ಸ್ಥಳಕ್ಕೆ ಕರೆತರಬೇಕಾಗಿತ್ತು. ಆದರೆ, ಈಗ ಈ ತಂತ್ರಜ್ಞಾನದ ನೆರವಿನಿಂದ ಅವುಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದ ಅವರು, ‘ಈ ತಂತ್ರಜ್ಞಾನ ಬಳಕೆಯಿಂದ ಕಲಾವಿದರಿಗೆ ಬೇಡಿಕೆ ಕಡಿಮೆಯಾಗುವುದಿಲ್ಲ. ಅಭಿನಯದ ಕೌಶಲ ತುಂಬಲು ತಂತ್ರಜ್ಞಾನಕ್ಕೆ ಸಾಧ್ಯವಿಲ್ಲ’ ಎಂದರು. 

ವಿದ್ಯಾರ್ಥಿನಿಯೂ ಆಗಿರುವ ಕವಯಿತ್ರಿ ಪಲಕ್ ಶರ್ಮಾ, ‘ಚಾಟ್‌ಜಿಪಿಟಿಯಿಂದ ಹಿಡಿದು ಡೀಪ್‌ಸೀಕ್‌ವರೆಗೂ ಹರಡಿರುವ ಸಾವಿರಾರು ಎಐ (ಕೃತಕ ಬುದ್ಧಿಮತ್ತೆ) ಟೂಲ್‌ಗಳು, ಅಂತರ್ಜಾಲದ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿವೆ. ಅಗತ್ಯಕ್ಕೆ ಅನುಗುಣವಾಗಿ ಈ ತಂತ್ರಜ್ಞಾನವನ್ನು ಬಳಿಸಿಕೊಳ್ಳಬೇಕು’ ಎಂದ ಅವರು, ಎಐ ನೆರವಿನಿಂದ ರಚಿಸಿದ ಕವಿತೆಯನ್ನೂ ವಾಚಿಸಿದರು. 

ಗೋಷ್ಠಿ ನಿರ್ವಹಿಸಿದ ಲೇಖಕಿ ಪ್ರತಿಭಾ ನಂದಕುಮಾರ್ ಅವರು, ಉದ್ಯೋಗ ನಷ್ಟದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಷಯ ತಜ್ಞರು, ಕರಡು ತಿದ್ದುವಿಕೆಯಂತಹ ಉದ್ಯೋಗವನ್ನು ಈ ತಂತ್ರಜ್ಞಾನ ಕಸಿದು ಕೊಳ್ಳಬಹುದು ಎಂದರು. 

ಇಂದು ಹಲವು ಕಾರ್ಯಕ್ರಮ

ಉತ್ಸವದ ಎರಡನೇ ದಿನವಾದ ಶನಿವಾರ ಕೂಡ ಎಂಟು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ವಿಷಯಗಳ ಮೇಲೆ ಸಾಹಿತ್ಯ ಗೋಷ್ಠಿಗಳನ್ನು ಹಮ್ಮಿಕೊಂಡಿದ್ದು ಸಾಹಿತ್ಯ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಪ್ರವೀಣ್ ಗೋಡ್ಖಿಂಡಿ ಮತ್ತು ಕಿರಣ್ ಗೋಡ್ಖಿಂಡಿ ಅವರಿಂದ ‘ಮುಂಜಾವಿನ ರಾಗ’ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಮಾನಸಿ ಪ್ರಸಾದ್ ಮತ್ತು ತಂಡದಿಂದ ‘ನದಿ ಮತ್ತು ಮಳೆಯ ಹಾಡು’ ಹಾಗೂ ಸಂಜೆ 6.30ಕ್ಕೆ ಟಿ.ಎಂ. ಕೃಷ್ಣ ಅವರಿಂದ ಶಾಸ್ತ್ರೀಯ ಗಾಯನ ಹಮ್ಮಿಕೊಳ್ಳಲಾಗಿದೆ. 

ಚಿಣ್ಣರ ಕಲರವ

ಮಕ್ಕಳಿಗೆ ಪ್ರತ್ಯೇಕವಾಗಿ ‘ಚಿಣ್ಣರ ಲೋಕ’ ರೂಪಿಸಲಾಗಿತ್ತು. ಮಕ್ಕಳ ಜತೆಗೆ ಸಂಭಾಷಣೆ ನಡೆಸಿದ ಲೇಖಕರು ಕಥೆಗಳನ್ನು ಹೇಳಿ ರಂಜಿಸಿದರು. ಚಿತ್ರಕಲೆ ಕಥೆ ಹೇಳುವುದೂ ಸೇರಿ ವಿವಿಧ ಸ್ಪರ್ಧೆಗಳ ಜತೆಗೆ ಮನೋರಂಜನೆಯ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಪೋಷಕರು ಕೂಡ ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 

ಹಸ್ತಾಕ್ಷರ ಮುಖಾಮುಖಿ

ಈ ಬಾರಿ ಲೇಖಕರ ಹಸ್ತಾಕರ ಪಡೆಯಲು ಹಾಗೂ ಅವರ ಜತೆಗೆ ಸಂವಾದ ನಡೆಸಲು ಪ್ರತ್ಯೇಕ ವೇದಿಕೆಯನ್ನು ನಿರ್ಮಿಸಲಾಗಿತ್ತು. ಇಲ್ಲಿ ಆಪ್ತ ಮಾತುಕತೆಯೂ ನಡೆಯಿತು. ಪುಸ್ತಕಕ್ಕೆ ಹಸ್ತಾಕ್ಷರ ಪಡೆದ ಸಾಹಿತ್ಯ ಪ್ರೇಮಿಗಳು ಅವರ ಜತೆಗೆ ಫೋಟೊಗಳನ್ನೂ ಕ್ಲಿಕ್ಕಿಸಿಕೊಂಡರು. ವಿವೇಕ ಶಾನಭಾಗ ಜಯಂತ ಕಾಯ್ಕಿಣಿ ದೀಪಾ ಭಾಸ್ತಿ ಪ್ರತಿಭಾ ನಂದಕುಮಾರ್ ರವಿ ಮಂತ್ರಿ ರೂಪಾ ಪೈ ವೋಲ್ಗಾ ಎಂ.ಎಸ್. ಆಶಾದೇವಿ ಕುಂ. ವೀರಭದ್ರಪ್ಪ ಸುಗತ ಶ್ರೀನಿವಾಸರಾಜು ಬಿ. ಜಯಮೋಹನ್‌ ಮತ್ತು ವಿಶ್ವಾಸ್‌ ಪಾಟೀಲ್ ಅವರು ಸಾಹಿತ್ಯಾಸಕ್ತರಿಗೆ ಮುಖಾಮುಖಿಯಾದರು. ಈ ವೇಳೆ ಪ್ರೇಕ್ಷಕರು ಅವರಿಗೆ ಕೆಲ ಪ್ರಶ್ನೆಗಳನ್ನೂ ಕೇಳಿ ಸಂದೇಹ ಬಗೆಹರಿಸಿಕೊಂಡರು. 

ಪಂಚ ಭಾಷಾ ಪುಸ್ತಕಗಳು

ಉತ್ಸವದಲ್ಲಿ ಕನ್ನಡ ತಮಿಳು ಮಲೆಯಾಳ ತೆಲುಗು ಮರಾಠಿ ಮತ್ತು ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಳಿಗೆಗಳು ಇದ್ದವು. ಈ ಬಾರಿ ಪ್ರತಿ ಭಾಷೆಯಿಂದ ತಲಾ ಒಂದು ಪ್ರಕಾಶನ ಸಂಸ್ಥೆಯ ಮಳಿಗೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಪುಸ್ತಕ ಬಿಡುಗಡೆಗೂ ಪ್ರತ್ಯೇಕ ವೇದಿಕೆ ಕಲ್ಪಿಸಲಾಗಿತ್ತು. ವಿವಿಧ ಲೇಖಕರ ಪುಸ್ತಕಗಳು ಈ ವೇದಿಕೆಯಲ್ಲಿ ಬಿಡುಗಡೆಯಾದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.