ADVERTISEMENT

ಧನಸಹಾಯ: ಹಾಲಿ ಮಾರ್ಗಸೂಚಿ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 16:14 IST
Last Updated 2 ಡಿಸೆಂಬರ್ 2022, 16:14 IST

ಬೆಂಗಳೂರು: ‘ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಧನಸಹಾಯಒದಗಿಸುವ ಹಾಲಿ ಮಾರ್ಗಸೂಚಿಯನ್ನು ರದ್ದುಪಡಿಸಿ, ಈ ಹಿಂದಿನಂತೆ ಮುಂಚಿತವಾಗಿ ಅನುದಾನ ಒದಗಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಕಲಾವಿದರ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಪರವಾಗಿ ಕಲಾವಿದ ಜಯಸಿಂಹ ಎಸ್. ಅವರು ಇಲಾಖೆ ನಿರ್ದೇಶಕ ಪ್ರಕಾಶ್ ನಿಟ್ಟಾಲಿ ಅವರಿಗೆ ಮನವಿ ಸಲ್ಲಿಸಿದರು. ‘ಡಿಸೆಂಬರ್ ಅಂತ್ಯದೊಳಗೆ ಮೂರು ಕಾರ್ಯಕ್ರಮ ಆಯೋಜಿಸಿ, ವರದಿ ಸಲ್ಲಿಸಬೇಕೆನ್ನುವುದು ಅವೈಜ್ಞಾನಿಕ. ಸಂಘ–ಸಂಸ್ಥೆಗಳ ಪದಾಧಿಕಾರಿಗಳಲ್ಲಿ ಬಹುತೇಕರು ಬಡವರಾಗಿದ್ದು, ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಅವರ ನೆರವಿಗೆ ಬರಬೇಕಾದ ಸರ್ಕಾರ, ಸಂಕಷ್ಟಕ್ಕೆ ನೂಕುತ್ತಿರುವುದು ವಿಪರ್ಯಾಸ’ ಎಂದು ಹೇಳಲಾಗಿದೆ.

‘ಸೇವಾಸಿಂಧು ಪೋರ್ಟಲ್‌ನಲ್ಲಿ ಮತ್ತೊಮ್ಮೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಿರುವುದರಿಂದ ಕಲಾವಿದರು ಗೊಂದಲಕ್ಕೆ ಒಳಗಾಗಿದ್ದಾರೆ. ಸ್ವಂತ ಹಣದಲ್ಲಿ ಕಾರ್ಯಕ್ರಮ ನಡೆಸಿ, ದಾಖಲಾತಿ ಸಲ್ಲಿಸಿದರೂ ಅನುದಾನ ಬರುತ್ತದೆ ಎಂಬ ಖಚಿತತೆ ಇಲ್ಲವಾಗಿದೆ.ಕೆಲವು ಪ್ರಭಾವಿ ಸಂಘ–ಸಂಸ್ಥೆಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸದೆಯೇ ಅನುದಾನ ಪಡೆದಿವೆ’ ಎಂದು ಆರೋಪಿಸಲಾಗಿದೆ.

ADVERTISEMENT

‘ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಸಂಘ–ಸಂಸ್ಥೆಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು. ₹ 2 ಲಕ್ಷದ ಮಿತಿಯನ್ನು ಸಡಿಲಿಸಿ, ಕಾರ್ಯಚಟುವಟಿಕೆ ಅನುಸಾರ ಅನುದಾನ ಒದಗಿಸಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.