ADVERTISEMENT

ಶಿಲ್ಪ ಕಲಾವಿದೆ ಕನಕ ಮೂರ್ತಿ ನಿಧನ

​ಪ್ರಜಾವಾಣಿ ವಾರ್ತೆ
Published 13 ಮೇ 2021, 7:32 IST
Last Updated 13 ಮೇ 2021, 7:32 IST
ಕನಕ ಮೂರ್ತಿ
ಕನಕ ಮೂರ್ತಿ   

ಬೆಂಗಳೂರು: ನಾಡಿನ ಖ್ಯಾತ ಶಿಲ್ಪ ಕಲಾವಿದರಲ್ಲಿ ಒಬ್ಬರಾದ ಕನಕ ಮೂರ್ತಿ (79) ಅವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಕೊರೊನಾ ಸೊಂಕಿತರಾಗಿದ್ದ ಅವರು, ಮನೆ ಆರೈಕೆಯಲ್ಲಿದ್ದರು. ಸಮಸ್ಯೆ ಗಂಭೀರ ಸ್ವರೂಪ ಪಡೆದ ಕಾರಣ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಪುರುಷರಿಗೆ ಸೀಮಿತವಾಗಿದ್ದ ಶಿಲ್ಪ ಕಲೆಯಲ್ಲಿ ಮಹಿಳೆಯರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟವರಲ್ಲಿ ಇವರೂ ಒಬ್ಬರು. 1942ರಲ್ಲಿ ಜನಿಸಿದ ಅವರು, ಹೆಸರಾಂತ ಶಿಲ್ಪಿಗಳಾದ ವಾದಿರಾಜ್ ಅವರ ಬಳಿ ಶಿಲ್ಪ ಕಲಾ ಅಭ್ಯಾಸ ಮಾಡಿದರು. ಬೆಂಗಳೂರಿನ ಲಾಲ್ ಬಾಗ್‌ನಲ್ಲಿರುವ ಕುವೆಂಪು ಅವರ ಕಂಚಿನ ಪ್ರತಿಮೆ, ಸತ್ಯಸಾಯಿ ಅಸ್ಪತ್ರೆಯಲ್ಲಿನ ನಾಲ್ಕು ಅಡಿ ಎತ್ತರದ ಹೊಯ್ಸಳ ಶೈಲಿಯ ವಿಷ್ಣು ಪ್ರತಿಮೆ ಮತ್ತು ಮೈಸೂರಿನ ಇನ್ಸಿಟ್ಯೂಷನ್ ಆಫ್ ಎಂಜಿನಿಯರ್ಸ್ ನಲ್ಲಿ ಇರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ದೇಶದ ವಿವಿಧ ದೇವಾಲಯಗಳಲ್ಲಿನ 200ಕ್ಕೂ ಹೆಚ್ಚು ಶಿಲ್ಪಗಳು ಇವರ ಕೈಚಳಕಕ್ಕೆ ಹಿಡಿದ ಕನ್ನಡಿಯಾಗಿದೆ.

ADVERTISEMENT

1996ರಲ್ಲಿ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1999ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, 2011ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ, 2019ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಫೆಲೋಶಿಪ್ ಗೂ ಭಾಜನರಾಗಿದ್ದಾರೆ. ಅದಲ್ಲದೇ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಬಿರುದುಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.