ADVERTISEMENT

ಖಾಸಗಿ ಕಂಪನಿ ಉದ್ಯೋಗಿ ಅರುಣ್ ರಾಜ್ ಹಲ್ಲೆಯಿಂದ ಸಾವು: ಮರಣೋತ್ತರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 22:02 IST
Last Updated 13 ಅಕ್ಟೋಬರ್ 2025, 22:02 IST
   

ಬೆಂಗಳೂರು: ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖಾಸಗಿ ಕಂಪನಿ ಉದ್ಯೋಗಿ ಅರುಣ್ ರಾಜ್ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅರುಣ್ ಅವರು ರಸ್ತೆ ಅಪಘಾತದಿಂದ ಮೃತಪಟ್ಟಿಲ್ಲ, ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಹೀಗಾಗಿ ಹುಳಿಮಾವು (ಕಾನೂನು ಹಾಗೂ ಸುವ್ಯವಸ್ಥೆ) ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬೇಗೂರಿನ ಹೊಂಗಸಂದ್ರ ನಿವಾಸಿ ಅರುಣ್ ರಾಜ್ (32) ಕೊಲೆಯಾದವರು. ಈ ಸಂಬಂಧ ಮೃತರ ತಂದೆ ಮುನಿರಾಜು ನೀಡಿದ ದೂರು ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.

ADVERTISEMENT

ಆಗಸ್ಟ್ 6ರಂದು ಬೇಗೂರು ಕಡೆಯಿಂದ ಬೇಗೂರು-ಕೊಪ್ಪ ರಸ್ತೆ ಕಡೆಗೆ ಅರುಣ್ ಬೈಕ್‌ನಲ್ಲಿ ಬರುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದು, ತೀವ್ರ ರಕ್ತಸ್ರಾವ ಉಂಟಾಗಿತ್ತು. ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ.  ಈ ಸಂಬಂಧ ಹುಳಿಮಾವು ಸಂಚಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

ಘಟನಾ ಸ್ಥಳದಲ್ಲಿ ಅಪಘಾತ ನಡೆದಿರುವ ಬಗ್ಗೆ ಯಾವುದೇ ಕುರುಹು ದೊರೆತಿರಲಿಲ್ಲ. ಮತ್ತೊಂದೆಡೆ ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ತಂದೆ ಆರೋಪಿಸಿದ್ದರು.

‘ಮರಣೋತ್ತರ ಪರೀಕ್ಷೆಯಲ್ಲಿ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕೈ-ಕಾಲಿಗೆ ತರಚಿದ ಗಾಯವಾಗಿದೆ. ಹೀಗಾಗಿ ರಸ್ತೆ ಮೇಲೆ ಬಿದ್ದಾಗ ಆಗಿರುವ ಗಾಯವಲ್ಲ. ಬಲವಾದ ವಸ್ತುವಿನಿಂದ ತಲೆಯ ಭಾಗಕ್ಕೆ ಹೊಡೆಯಲಾಗಿದೆ ಎಂದು ವರದಿ ತಿಳಿಸಿದೆ. ಪೂರಕವೆಂಬಂತೆ ಬೈಕ್ ಹಾಗೂ ಹೆಲ್ಮೆಟ್ ಗೆ ಹಾನಿಯಾಗಿರಲಿಲ್ಲ’  ಎಂದು ಪೋಲಿಸರು ತಿಳಿಸಿದ್ಧಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ್, ‘ಆಗಸ್ಟ್ 6ರಂದು ನೈಸ್ ರಸ್ತೆ ಬ್ರಿಡ್ಜ್ ಬಳಿ ಬೈಕ್ ಸವಾರ  ಬಿದ್ದಿರುವುದನ್ನು ನೋಡಿ ಸ್ಥಳೀಯ ಆಟೊ ಚಾಲಕ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹಾಗಾಗಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಅರುಣ್ ಅವರ ಮೊಬೈಲ್ ನಾಪತ್ತೆಯಾಗಿದ್ದು, ಪರಿಚಯಸ್ಥರೇ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.