
ಆರ್ಯನ್ ಖಾನ್
ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ನಗರದ ಪಬ್‌ವೊಂದರ ಬಾಲ್ಕನಿಯಲ್ಲಿ ನಿಂತು ಅಸಭ್ಯವಾಗಿ ಕೈ ಬೆರಳು ತೋರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಹುಸೇನ್ ಓವೈಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರ್ಯನ್ ಖಾನ್ ಅವರು ಅಸಭ್ಯವಾಗಿ ವರ್ತನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದನ್ನು ಆಧರಿಸಿ ಹುಸೇನ್ ಅವರು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಗೂ ಮಹಿಳಾ ಆಯೋಗಕ್ಕೆ ಶುಕ್ರವಾರ ದೂರು ನೀಡಿದ್ದಾರೆ. ಕಬ್ಬನ್ ಪಾರ್ಕ್ ಹಾಗೂ ಅಶೋಕ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಸಹ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆರ್ಯನ್ ಖಾನ್ ಅವರು ನಡೆದುಕೊಂಡ ರೀತಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹುಸೇನ್ ದೂರಿನಲ್ಲಿ ಕೋರಿದ್ದಾರೆ.
ನ.28ರಂದು ಆರ್ಯನ್ ಖಾನ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದರು. ಆರ್ಯನ್ ಖಾನ್ ನೋಡಲು ಪಬ್ ಬಳಿಗೆ ಅಭಿಮಾನಿಗಳು ಬಂದಿದ್ದರು. ಆ ವೇಳೆ ಆರ್ಯನ್ ಪಬ್‌ನ ಬಾಲ್ಕನಿಯಲ್ಲಿ ನಿಂತು, ಅಲ್ಲಿದ್ದ ಸಾರ್ವಜನಿಕರತ್ತ ಮಧ್ಯದ ಬೆರಳು ತೋರಿಸಿದ್ದರು. ನಂತರ, ಅಭಿಮಾನಗಳತ್ತ ಕೈಬೀಸಿ ತೆರಳಿದ್ದರು. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಗ, ಚಿತ್ರನಟ ಝೈದ್ ಖಾನ್ ಹಾಗೂ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಅವರು ಜತೆಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.