
ಸಂಗ್ರಹ ಚಿತ್ರ
ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ (ಎಂಡಿಎಂ) ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್ 1ರಿಂದ ಬೆಂಗಳೂರು, ತುಮಕೂರು, ಮಂಡ್ಯ ಹಾಗೂ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವರ ಮನೆಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಎಲ್ಲ ರೀತಿಯ ಸೌಲಭ್ಯ ನೀಡಬೇಕು. ಐಸಿಡಿಎಸ್ ಹಾಗೂ ಎಂಡಿಎಂ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ನೀಡಬೇಕು, ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.
‘ಅಂಗನವಾಡಿಗಳಲ್ಲಿ ಪೂರೈಕೆ ಆಗುತ್ತಿರುವ ಪ್ರೋಟಿಫೈಡ್ ಆಹಾರ ಪದ್ಧತಿಯನ್ನು ಕೈಬಿಟ್ಟು, ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು ಹಾಗೂ ಫಲಾನುಭವಿಗಳ ಘಟಕ ವೆಚ್ಚವನ್ನು ಹೆಚ್ಚಿಸಬೇಕು. ಮುಖ ಚಹರೆ ಗುರುತಿಸುವಿಕೆ (ಎಫ್‌ಆರ್‌ಎಸ್) ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು. ಚುನಾವಣೆ ಸೇರಿದಂತೆ ಇತರೆ ಕೆಲಸಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಹೊರಗಿಡಬೇಕು’ ಎಂದು ಹೇಳಿದರು.
‘ಬಿಸಿಯೂಟ ನೌಕರರ ವೇತನ ಹೆಚ್ಚಿಸುವುದರ ಜೊತೆಗೆ ಆರು ಗಂಟೆ ಕೆಲಸದ ಅವಧಿ ಸಂಬಂಧ ಆದೇಶ ಹೊರಡಿಸಬೇಕು. ಅಡುಗೆ ಮಾಡುವ ಸಂದರ್ಭದಲ್ಲಿ ಆಗುವ ಅವಘಡಗಳಿಗೆ ಇರುವ ಪರಿಹಾರ ಹೆಚ್ಚಿಸಿ, ಆರೋಗ್ಯ ವಿಮೆಯ ಸೌಲಭ್ಯ ನೀಡಬೇಕು. ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಬೇಕು. ಶ್ರಮಶಕ್ತಿ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ಆನ್‌ಲೈನ್‌ನಲ್ಲಿ ದಾಖಲಾತಿ ಮಾಡುವ ಸಲುವಾಗಿ ಸ್ಮಾರ್ಟ್ ಫೋನ್ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹15 ಸಾವಿರ ವೇತನ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
ಎಚ್.ಎಸ್. ಸುನಂದಾ, ಮಾಲಿನಿ ಮೆಸ್ತಾ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.