ADVERTISEMENT

ಅಶೋಕ ಖೇಣಿ ಅರ್ಜಿ: ಅಬ್ರಹಾಂಗೆ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 21:45 IST
Last Updated 9 ಆಗಸ್ಟ್ 2022, 21:45 IST
   

ಬೆಂಗಳೂರು: ಅಶೋಕ ಎಂ.ಖೇಣಿ ಹಾಗೂ ಅವರ ಸಹೋದರ ಸಂಜಯ್ ಖೇಣಿ ವಿರುದ್ಧ ಸಲ್ಲಿಸಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ದೂರುದಾರರೂ ಆದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಖೇಣಿ ಸಹೋದರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

‘ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆಗೆ ಮುಂದಾಗಬಾರದು’ ಎಂದು ಈ ಹಿಂದೆ ನೀಡಿದ್ದ ಆದೇಶವನ್ನು ವಿಸ್ತರಿಸಿದ ನ್ಯಾಯ ಪೀಠಸೆಪ್ಟೆಂಬರ್ 5ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

ADVERTISEMENT

‘ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಯಾದಿಗೆ ತಮ್ಮ ಹೆಸರು ಸೇರಿಸುವಂತೆ ಕೋರಿ ಅಶೋಕ್ ಖೇಣಿ 2013 ರ ಏಪ್ರಿಲ್ 1ರಂದು ಫಾರಂ-6ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯಲ್ಲಿ ಅವರು ಸಹಿ ಮಾಡಿರಲಿಲ್ಲ. ಬದಲಿಗೆ ಅಶೋಕ ಎಂ. ಖೇಣಿ ಸಹಿಯನ್ನು ಅವರ ಸಹೋದರ ಸಂಜಯ್ ಖೇಣಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ ಎಂ. ಖೇಣಿ ವಿದೇಶ ಪ್ರವಾಸದಲ್ಲಿದ್ದರು’ ಎಂದು ಆರೋಪಿಸಿ ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಖೇಣಿ ಸಹೋದರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಖೇಣಿ ಸಹೋ ದರರು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿ ಸಿತ್ತು. ‘ಈ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಅಶೋಕ್ ಎಂ. ಖೇಣಿ ಹಾಗೂ ಅವರ ತಮ್ಮ ಸಂಜಯ್ ಖೇಣಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.