ADVERTISEMENT

ಹಲ್ಲೆ ಪ್ರಕರಣ | ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಟಿಕಾಯತ್ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 3:09 IST
Last Updated 3 ಫೆಬ್ರುವರಿ 2023, 3:09 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ಬೆಂಗಳೂರು: ನಗರದ ಗಾಂಧಿಭವನ ದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಎರಚಿ ಹಲ್ಲೆ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಟಿಕಾಯತ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

‘ಟಿಕಾಯತ್ ಮೇಲೆ ಮಸಿ ಎರಚಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಎಚ್‌.ಆರ್. ಶಿವಕುಮಾರ್, ಘಟನೆ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶಿವಕುಮಾರ್ ಅವರಿಂದ ದೂರು ಸ್ವೀಕರಿಸಲಾಗಿದೆ. ಆರೋಪಿಗಳಾದ ರಾಕೇಶ್ ಟಿಕಾಯತ್, ಯುದ್ಧವೀರ ಸಿಂಗ್, ಬಿ. ಅನುಸೂಯಮ್ಮ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲೆಂದು ‘ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನೇತೃತ್ವದಲ್ಲಿ ರೈತ ಮುಖಂಡರು 2022ರ ಮೇ 30ರಂದು ‘ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ ನಡೆಸಿದ್ದರು. ರಾಕೇಶ್ ಟಿಕಾಯತ್ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.’

‘ಆರೋಪಿ ಅನುಸೂಯಮ್ಮ ತೆಲುಗು ಭಾಷೆಯಲ್ಲಿ ಮಾತನಾಡಿದ್ದರು. ಅದನ್ನು ಪ್ರಶ್ನಿಸಿದ್ದ ದೂರುದಾರ ಶಿವಕುಮಾರ್, ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದ್ದರು. ಅಷ್ಟಾದರೂ ಅನುಸೂಯಮ್ಮ ತೆಲುಗಿನಲ್ಲಿ ಭಾಷಣ ಮುಂದುವರಿಸಿದ್ದರು. ಆಗ ದೂರುದಾರ, ವೇದಿಕೆ ಏರಿ ಮೈಕ್ ಕಸಿಯಲು ಮುಂದಾಗಿದ್ದರು. ತಡೆದಿದ್ದ ಆರೋಪಿಗಳು, ಕುರ್ಚಿಗಳನ್ನು ಎತ್ತಿ ಹೊಡೆದಿದ್ದರು. ಇದರಿಂದ ಗಾಯಗಳಾಗಿದ್ದವು ಎಂದು ದೂರುದಾರರು ಆರೋಪಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.