ADVERTISEMENT

ಲಾಠಿಯಿಂದ ಹಲ್ಲೆ: ಯುವಕನ ಸ್ಥಿತಿ ಚಿಂತಾಜನಕ

ತಂದೆಗೆ ಔಷಧಿ ತರಲು ಹೊರಟಿದ್ದ ತನ್ವೀರ್ l ಡಿ.ಜೆ.ಹಳ್ಳಿ ಪೊಲೀಸರಿಂದ ಥಳಿತ ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:47 IST
Last Updated 22 ಏಪ್ರಿಲ್ 2019, 19:47 IST
ಶಿಫಾ ಆಸ್ಪತ್ರೆಗೆ ದಾಖಲಾಗಿರುವ ಮೊಹಮ್ಮದ್ ತನ್ವೀರ್
ಶಿಫಾ ಆಸ್ಪತ್ರೆಗೆ ದಾಖಲಾಗಿರುವ ಮೊಹಮ್ಮದ್ ತನ್ವೀರ್   

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಗೆ ಔಷಧಿ ತರಲೆಂದು ಬೈಕ್‌ನಲ್ಲಿ ಹೊರಟಿದ್ದ ಮೊಹಮ್ಮದ್ ತನ್ವೀರ್‌ (23) ಎಂಬುವರನ್ನು ಅಡ್ಡಗಟ್ಟಿದ್ದ ಪೊಲೀಸರು ಮನಬಂದಂತೆ ಲಾಠಿಯಿಂದ ಥಳಿಸಿದ್ದಾರೆ ಎನ್ನಲಾಗಿದ್ದು, ತೀವ್ರ ಗಾಯಗೊಂಡಿರುವ ತನ್ವೀರ್ ಅವರನ್ನು ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಹಲ್ಲೆಯಿಂದಾಗಿ ತನ್ವೀರ್ ಅವರ ಎರಡೂ ಕಿಡ್ನಿಗೆ ತೀವ್ರ ಪೆಟ್ಟು ಬಿದ್ದಿದೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಬೆಡ್ ಮೇಲೆ ಕುಳಿತುಕೊಳ್ಳಲು ಸಹ ಆಗುತ್ತಿಲ್ಲ. ಸಾವು– ಬದುಕಿನ ನಡುವೆ ಹೋರಾಡುತ್ತಿದ್ದಾರೆ’ ಎಂದು ಸಂಬಂಧಿಕರು ತಿಳಿಸಿದರು.

ಆಗಿದ್ದೇನು: ‘ತಂದೆಗೆ ಹುಷಾರಿಲ್ಲದಿದ್ದರಿಂದ ಔಷಧಿ ತರಲೆಂದು ತನ್ವೀರ್, ಸ್ನೇಹಿತ ಡ್ಯಾನಿಶ್ ಜೊತೆ ಏಪ್ರಿಲ್ 10ರಂದು ರಾತ್ರಿ ಬೈಕ್‌ನಲ್ಲಿ ಹೊರಟಿದ್ದರು. ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ತರುವಂತೆ ಹೇಳಲು ತಾಯಿ, ಮೊಬೈಲ್‌ಗೆ ಕರೆ ಮಾಡಿದ್ದರು. ಅವರ ಜೊತೆ ಮಾತನಾಡುತ್ತ ಬೈಕ್‌ ಚಲಾಯಿಸುತ್ತಿದ್ದರು’ ಎಂದು ಸಂಬಂಧಿಕರು ಹೇಳಿದರು.

ADVERTISEMENT

‘ಬೈಕ್‌ ಅಡ್ಡಗಟ್ಟಿದ್ದ ಡಿ.ಜೆ.ಹಳ್ಳಿ ಠಾಣೆಯ ಕಾನ್‌ಸ್ಟೆಬಲ್ ಅಯ್ಯಪ್ಪ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿ ಕಸಿದುಕೊಳ್ಳಲು ಹೋಗಿದ್ದರು. ‘ತಂದೆಗೆ ಹುಷಾರಿಲ್ಲ. ಔಷಧಿ ಸಂಬಂಧ ತಾಯಿ ಜೊತೆ ಮಾತನಾಡುತ್ತಿದ್ದೇನೆ’ ಎಂದು ತನ್ವೀರ್ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಕಾನ್‌ಸ್ಟೆಬಲ್‌, ಲಾಠಿ ಮುರಿಯುಂತೆ ಹೊಡೆದಿದ್ದರು. ಬಿಡಿಸಲು ಹೋದ ಸ್ನೇಹಿತನನ್ನು ಥಳಿಸಿದ್ದರು’ ಎಂದರು.

‘ಕಾನ್‌ಸ್ಟೆಬಲ್‌ ಅವರೇ ಹೊಯ್ಸಳ ಗಸ್ತು ವಾಹನವನ್ನು ಸ್ಥಳಕ್ಕೆ ಕರೆಸಿದ್ದರು. ಆ ವಾಹನದಲ್ಲಿದ್ದ ಪಿಎಸ್ಐ ಸಂತೋಷ್‌ಕುಮಾರ್ ಜೊತೆ ಸೇರಿ ತನ್ವೀರ್‌ ಅವರನ್ನು ಬಲವಂತವಾಗಿ ಒಳಗೆ ದಬ್ಬಿದ್ದರು. ವಾಹನದಲ್ಲಿದ್ದ ಮತ್ತೊಬ್ಬ ಕಾನ್‌ಸ್ಟೆಬಲ್, ಕಾಲಿನಿಂದ ಒದ್ದಿದ್ದರು’ ಎಂದರು.

‘ಠಾಣೆಗೆ ಕರೆದೊಯ್ದು ತಡರಾತ್ರಿ 1 ಗಂಟೆಯಿಂದ ಮರುದಿನ ಬೆಳಿಗ್ಗೆ 8 ಗಂಟೆಯವರೆಗೂ ಪಿಎಸ್ಐ ಹಾಗೂ ಎಂಟು ಸಿಬ್ಬಂದಿ, ತನ್ವೀರ್‌ಗೆ ಲಾಠಿ ಹಾಗೂ ರಾಡ್‌ನಿಂದ ಹೊಡೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯೇ ಠಾಣೆಗೆ ಹೋಗಿ ಮಗನನ್ನು ಬಿಡಿಸಿಕೊಂಡು ಬಂದಿದ್ದರು. ಏಪ್ರಿಲ್ 12ರಂದು ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಗಾಬರಿಗೊಂಡು ಮಗನನ್ನು ಕಾವಲ್‌ ಭೈರಸಂದ್ರದ ಬಾಂಬೆ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಎರಡೂ ಕಿಡ್ನಿಗಳಿಗೆ ಪೆಟ್ಟು ಬಿದ್ದಿರುವುದಾಗಿ ಹೇಳಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸಂಬಂಧಿಕರು ವಿವರಿಸಿದರು.

ಪಿಎಸ್‌ಐ, ಕಾನ್‌ಸ್ಟೆಬಲ್‌ ಅಮಾನತು

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್ ಸಿಂಗ್, ‘ಯುವಕನ ಸಂಬಂಧಿಕರು ಘಟನೆ ಬಗ್ಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿ ಪಿಎಸ್ಐ ಸಂತೋಷ್‌ ಕುಮಾರ್ ಹಾಗೂ ಕಾನ್‌ಸ್ಟೆಬಲ್‌ ಅಯ್ಯಪ್ಪ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿರುವ ಮೊಹಮ್ಮದ್ ತನ್ವೀರ್ ಅವರ ಹೇಳಿಕೆಪಡೆಯಲಾಗಿದೆ. ಅಪಾಯಕಾರಿ ಆಯುಧದಿಂದ ಹಲ್ಲೆ ಹಾಗೂ ಅಕ್ರಮ ಕೂಟ ರಚಿಸಿಕೊಂಡು ಶಾಂತಿ ಕದಡಿದ ಆರೋಪದಡಿಪಿಎಸ್ಐ ಹಾಗೂ ಕಾನ್‌ಸ್ಟೆಬಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸಂಬಂಧಿಕರು, ‘ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ವಿರುದ್ಧ ಕೊಲೆಗ ಯತ್ನ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.