ADVERTISEMENT

ಪೊಲೀಸರ ಮೇಲೆ ಹಲ್ಲೆ; ರೌಡಿ ಪಟ್ಟಿಗೆ ಅಣ್ಣ– ತಮ್ಮನ ಹೆಸರು ?

ಪಿಎಸ್‌ಐ, ಕಾನ್‌ಸ್ಟೆಬಲ್‌ಗೆ ಲಾಠಿಯಿಂದ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 22:34 IST
Last Updated 10 ಡಿಸೆಂಬರ್ 2021, 22:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಯಲಹಂಕ ನ್ಯೂ ಟೌನ್‌ ಠಾಣೆ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಮೇಲೆ ಲಾಠಿಯಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಬಂಧಿಸಲಾಗಿರುವ ಅಣ್ಣ– ತಮ್ಮನ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪೊಲೀಸರು ಮುಂದಾಗಿದ್ದಾರೆ.

‘ಠಾಣೆ ವ್ಯಾಪ್ತಿಯ ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ತೆಗೆಯುವ ವಿಚಾರವಾಗಿ ಡಿ. 6ರಂದು ರಾತ್ರಿ ಗಲಾಟೆ ಆಗಿತ್ತು. ಮಫ್ತಿಯಲ್ಲಿದ್ದ ಪಿಎಸ್‌ಐ ಡಿ.ಕೆ. ಶ್ರೀಶೈಲ ಮೇಲೆ ಹಲ್ಲೆ ಮಾಡಲಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಹೋದ ಕಾನ್‌ಸ್ಟೆಬಲ್‌ಗಳಾದ ಅಸ್ಲಂ ಸಂಗಾಪುರ ಹಾಗೂ ಹನುಮಂತಪ್ಪ ಎಂಬುವರನ್ನೂ ಥಳಿಸಲಾಗಿತ್ತು. ಈ ಸಂಬಂಧ ಆರೋಪಿಗಳಾದ ಮನೋಜ್ (27) ಹಾಗೂ ಆತನ ತಮ್ಮ ಧೀರಜ್‌ನನ್ನು (26) ಬಂಧಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಘಟನೆ ಬಗ್ಗೆ ಕಾನ್‌ಸ್ಟೆಬಲ್‌ ಅಸ್ಲಂ ದೂರು ನೀಡಿದ್ದರು. ಜೀವ ಬೆದರಿಕೆ (ಐಪಿಸಿ 506), ಅಕ್ರಮವಾಗಿ ತಡೆದ (ಐಪಿಸಿ 341), ಅಪರಾಧ ಸಂಚು (ಐಪಿಸಿ 34), ಹಲ್ಲೆ (ಐಪಿಸಿ 323), ದೊಣ್ಣೆಯಿಂದ ಹಲ್ಲೆ (ಐಪಿಸಿ 324), ಸರ್ಕಾರಿ ಕೆಲಸಕ್ಕೆ ಅಡ್ಡಿ (ಐಪಿಸಿ 332, ಐಪಿಸಿ 353) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.’

ADVERTISEMENT

‘ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಮನೋಜ್ ಹಾಗೂ ಆಹಾರ ಪೂರೈಕೆ ಕಂಪನಿ ವ್ಯವಸ್ಥಾಪಕನಾದ ಧೀರಜ್, ಒಟ್ಟಿಗೆ ಸೇರಿ ಲಾಠಿ ಕಸಿದುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ರೌಡಿ ರೀತಿಯಲ್ಲಿ ವರ್ತಿಸಿ ಸ್ಥಳೀಯರಲ್ಲಿ ಭಯವನ್ನುಂಟು ಮಾಡಿದ್ದರು. ಹೀಗಾಗಿ, ಅವರಿಬ್ಬರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಕಡತ ಸಿದ್ಧಪಡಿಸಿ, ಡಿಸಿಪಿ ಮೂಲಕ ಪೊಲೀಸ್ ಕಮಿಷನರ್ ಅವರಿಗೆ ಕಳುಹಿಸಲಾಗುವುದು’ ಎಂದೂ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.