ADVERTISEMENT

ವಿಪಕ್ಷದ ಕಡೆ ತಿರುಗದ ಕ್ಯಾಮರಾ: ಅಧಿಕಾರಿ ಅಮಾನತು

ವಿಧಾನಸಭೆ ಕಲಾಪದ ನೇರಪ್ರಸಾರದಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 16:01 IST
Last Updated 4 ಮಾರ್ಚ್ 2025, 16:01 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ವಿಧಾನಸಭೆಯ ಕಲಾಪದ ನೇರ ಪ್ರಸಾರದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ತೋರಿಸದೇ, ಕೇವಲ ಆಡಳಿತ ಪಕ್ಷದವರನ್ನು ತೋರಿಸುತ್ತಿರುವ ಪ್ರಮಾದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡುವಂತೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ರೂಲಿಂಗ್‌ ನೀಡಿದರು.

ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ವಿರೋಧಪಕ್ಷದ ಪ್ರಮುಖರು ಸಭಾಧ್ಯಕ್ಷರಿಗೆ ದೂರು ನೀಡಿದ್ದರು. ಆದರೆ, ಮಂಗಳವಾರ ಅದನ್ನು ಸರಿಪಡಿಸಿರಲಿಲ್ಲ. ಬೆಳಿಗ್ಗೆ ಕಲಾಪದ ವೇಳೆ ತೀವ್ರ ಗದ್ದಲ ನಡೆದು ಕೆಲಕಾಲ ಕಲಾಪ ಮುಂದೂಡಿಕೆಗೂ ಈ ವಿಷಯ ಕಾರಣವಾಯಿತು.

ADVERTISEMENT

ಪ್ರಶ್ನೋತ್ತರ, ಶೂನ್ಯ ವೇಳೆಯ ಬಳಿಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮುಂದಾದರು. ಅವರು ಮಾತನಾಡುತ್ತಿರುವುದು ಸದನದೊಳಗಿನ ಟಿ.ವಿ ಪರದೆಯಲ್ಲಿ ಬಿತ್ತರವಾಗುತ್ತಿರಲಿಲ್ಲ. ಆಗ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ‘ಆಡಳಿತ ಪಕ್ಷದ ಸದಸ್ಯರನ್ನು ಮಾತ್ರ ನೇರ ಪ್ರಸಾರದಲ್ಲಿ ತೋರಿಸಲಾಗುತ್ತಿದೆ. ವಿರೋಧ ಪಕ್ಷದವರನ್ನು ತೋರಿಸದೇ ಇರುವುದಕ್ಕೆ ಕಾರಣವೇನು’ ಎಂದು ಪ್ರಶ್ನಿಸಿದರು.

‘ಹಿಂದೆ ಸದನದ ಕಲಾಪವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇರ ಪ್ರಸಾರ ಮಾಡುತ್ತಿತ್ತು. ಈಗ ಕಾಂಗ್ರೆಸ್ ಕಾರ್ಯಕರ್ತರಿಗೆ ಆ ಕೆಲಸ ಕೊಟ್ಟಿದ್ದಾರೆ. ನಾನು ಜವಾಬ್ದಾರಿಯಿಂದ ಈ ಆಪಾದನೆ ಮಾಡುತ್ತಿದ್ದೇನೆ’ ಎಂದು ಬೆಲ್ಲದ್ ಹೇಳಿದರು.

ಆಡಳಿತ– ವಿರೋಧ ಪಕ್ಷದ ಸದಸ್ಯರ ಮಧ್ಯೆ ವಾಕ್ಸಮರ ಜೋರಾಯಿತು. ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಸಮಜಾಯಿಷಿ ನೀಡಲು ಮುಂದಾದರು. ‘ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಆಗಿದೆ. ವಿರಾಮದ ವೇಳೆ ಸಿಬ್ಬಂದಿ ಕರೆಸಿ ವಿಚಾರಿಸಿ, ಸರಿಪಡಿಸುವೆ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಭರವಸೆ ನೀಡಿದರು.

ಚರ್ಚೆ ಮುಂದುವರಿದಾಗ ವಿರೋಧ ಪಕ್ಷದವರು ಮಾತನಾಡುವಾಗಲೆಲ್ಲ ಆ ದೃಶ್ಯ ನೇರ ಪ್ರಸಾರ ಆಗಲಿಲ್ಲ. ಆ ಸಮಯದಲ್ಲಿ ಸಭಾಧ್ಯಕ್ಷರ ಪೀಠದ ದೃಶ್ಯ ಪ್ರಸಾರವಾಗುತ್ತಿತ್ತು. ಆಡಳಿತ ಪಕ್ಷದವರು ಮಾತನಾಡುವಾಗ ಮಾತನಾಡುವ ಆ ಸದಸ್ಯರ ದೃಶ್ಯ ಪ್ರಸಾರವಾಗುತ್ತಿತ್ತು. ಬಿಜೆಪಿ, ಜೆಡಿಎಸ್‌ ಸದಸ್ಯರು ಮತ್ತೆ ತಕರಾರು ಎತ್ತಿದರು. ಸಮಸ್ಯೆ ಪರಿಹಾರ ಆಗುವವರೆಗೂ ಕಲಾಪ ಮುಂದೂಡುವಂತೆ ಪಟ್ಟು ಹಿಡಿದರು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷರು, ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖರೊಂದಿಗೆ ಚರ್ಚಿಸಿದರು.

ಆದರೂ ಸಮಸ್ಯೆ ಬಗೆಹರಿಯದೇ ಇದ್ದಾಗ, ಅಧಿಕಾರಿ ಅಮಾನತಿಗೆ ಸಭಾಧ್ಯಕ್ಷರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.