ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ: ಆರೋಪಿ ಸೌಮ್ಯ ಬಂಧನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 9:53 IST
Last Updated 25 ಏಪ್ರಿಲ್ 2022, 9:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಆರೋಪಿ ಸೌಮ್ಯ ಎಂಬಾಕೆಯನ್ನು ಮಲ್ಲೇಶ್ವರ ಪೊಲೀಸರು ಭಾನುವಾರ ರಾತ್ರಿ ಮೈಸೂರಿನಲ್ಲಿ ಬಂಧಿಸಿದ್ದಾರೆ.

ಮಾರ್ಚ್‌ 14 ರಂದು ನಿಗದಿಯಾಗಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯು ಪರೀಕ್ಷೆಗೆ ಅರ್ಧಗಂಟೆ ಮುಂಚೆ (ಬೆಳಿಗ್ಗೆ 8.30) ಸೋರಿಕೆಯಾಗಿ ವಾಟ್ಸಾಪ್‌ನಲ್ಲಿ ಹರಿದಾಡಿತ್ತು.

ಸೌಮ್ಯ ಅವರ ಮೊಬೈಲ್ ಸಂಖ್ಯೆಯಿಂದಲೇ ಸುಮಾರು 18 ಪ್ರಶ್ನೆಗಳು ಸೋರಿಕೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಮಲ್ಲೇಶ್ವರ ಪೊಲೀಸ್ ಠಾಣೆಗೆ ಇದೇ 22 ರಂದು ದೂರು ನೀಡಿದ್ದರು.

ADVERTISEMENT

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.

'ಸೌಮ್ಯ ಎಂಬಾಕೆಯನ್ನು ಮೈಸೂರಿನಲ್ಲಿ ಬಂಧಿಸಿ ಭಾನುವಾರ ರಾತ್ರಿ ನಗರಕ್ಕೆ ಕರೆತರಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಆಕೆಯನ್ನು ಪೊಲೀಸ್ ಸುಪರ್ದಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ' ಎಂದು ಉತ್ತರ ವಿಭಾಗದ ಡಿಸಿಪಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.