ADVERTISEMENT

ಆಸ್ಟ್ರಾನೊಮಿ ಎಕ್ಸ್‌ಪೋ 1.0 | ಬಾಹ್ಯಾಕಾಶದ ಕೌತುಕ: ಬೆರಗಾದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 14:52 IST
Last Updated 24 ಜುಲೈ 2025, 14:52 IST
ನಗರದಲ್ಲಿ ನಡೆದ ಆಸ್ಟ್ರಾನೋಮಿ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ರಾಘವೇಂಧೀರಾ, ಡಾ. ವಿನೋದ್ ಕುಮಾರ್, ಟಿ.ಕೆ. ಸುಂದರಮೂರ್ತಿ, ಎಂ.ಎಸ್. ಶ್ರೀನಿವಾಸನ್, ಮಾರ್ಗರಿಟಾ ಸಫೊನೊವಾ ಭಾಗವಹಿಸಿದ್ದರು.
ನಗರದಲ್ಲಿ ನಡೆದ ಆಸ್ಟ್ರಾನೋಮಿ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ರಾಘವೇಂಧೀರಾ, ಡಾ. ವಿನೋದ್ ಕುಮಾರ್, ಟಿ.ಕೆ. ಸುಂದರಮೂರ್ತಿ, ಎಂ.ಎಸ್. ಶ್ರೀನಿವಾಸನ್, ಮಾರ್ಗರಿಟಾ ಸಫೊನೊವಾ ಭಾಗವಹಿಸಿದ್ದರು.   

ಬೆಂಗಳೂರು: ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ಐನಾಕ್ಸ್‌ ಚಿತ್ರಮಂದಿರದಲ್ಲಿ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿಗೆ ಚಾಲನೆ ನೀಡಿ, ಲಾಂಛನ ಮತ್ತು ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.  

ಪಿಪಿಟಿ ಪ್ರದರ್ಶನದ ಮೂಲಕ ಗ್ರಹಗಳು, ನಕ್ಷತ್ರಗಳು, ಗ್ಯಾಲಕ್ಸಿಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಖಗೋಳ ವಿಜ್ಞಾನ, ಇಸ್ರೊ ಸಾಧನೆ ಕುರಿತು 3ಡಿ ವಿಶೇಷ ಚಿತ್ರ ಪ್ರದರ್ಶಿಸಲಾಯಿತು. ಭೂಮಿಯ ರಚನೆ ಹೇಗಾಯಿತು ಮತ್ತು ಮಾನವ ವಿಕಾಸದ ಪರಿಕಲ್ಪನೆಯನ್ನು ಪ್ರದರ್ಶಿಸಿದ್ದು, ಮಕ್ಕಳಿಗೆ ಹೊಸ ಲೋಕವೊಂದನ್ನು ಪರಿಚಯಿಸಿತು.

ಜತೆಗೆ ಬಾಹ್ಯಾಕಾಶ ಮತ್ತು ವಿಜ್ಞಾನದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಬಾಹ್ಯಾಕಾಶ ಪರಿಶೋಧನೆ ಮತ್ತು ರಾಕೆಟ್ ತಂತ್ರಜ್ಞಾನದ ಪ್ರಮುಖ ಅಂಶಗಳ ವಿಶೇಷ ಚಿತ್ರ ಪ್ರದರ್ಶಗೊಂಡಿತು. ಇದೇ ವೇಳೆ ವಿದ್ಯಾರ್ಥಿ ಬಾಹ್ಯಾಕಾಶ ಕಲಿಕಾ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಲಾಯಿತು.

ADVERTISEMENT

ಮಕ್ಕಳ ಹಕ್ಕುಗಳ ಕಾರ್ಯಕರ್ತ ರಾಘವೇಂಧೀರಾ, ‘ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳ ಪರಿಣಾಮ ಇಂದು ಬಾಹ್ಯಾಕಾಶ ವಿಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಿದೆ. ಪ್ರತಿಯೊಂದು ಗ್ರಹಗಳು ಮತ್ತು ಸೌರಮಂಡಲದ ಅಧ್ಯಯನಕ್ಕೆ ಇದು ನೆರವಾಗಿದೆ. ಭಾರತ ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ’ ಎಂದರು. 

ಇಸ್ರೊ ಮಾಜಿ ವಿಜ್ಞಾನಿ ಇಳಂಗೋವನ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.  ಏರಿಯನ್ ಭಾರತ್ ಸಿಇಒ ರಶ್ಮಿ ಸುಮಂತ್ ಮತ್ತು ಪ್ರಾದೇಶಿಕ ಸಂಯೋಜಕ ಸಂದೀಪ್ ಮಾತನಾಡಿದರು.

150ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪ್ರಾಂಶುಪಾಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಐಎನ್‌-ಸ್ಪೇಸ್‌ನ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಡಾ. ವಿನೋದ್ ಕುಮಾರ್, ಇಸ್ರೊ ಮಾಜಿ ಮಿಷನ್ ನಿರ್ದೇಶಕ ಟಿ.ಕೆ. ಸುಂದರಮೂರ್ತಿ, ಯುಆರ್‌ಎಸ್‌ಸಿಯ ಮಾಜಿ ನಿರ್ದೇಶಕ ಎಂ.ಎಸ್. ಶ್ರೀನಿವಾಸನ್, ಕೈಬರಹ ತಜ್ಞ ಪ್ರೊ. ಕೆ.ಸಿ. ಜನಾರ್ದನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.