ADVERTISEMENT

ಆ್ಯಂಬಿಡೆಂಟ್‌ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 19:59 IST
Last Updated 14 ಡಿಸೆಂಬರ್ 2018, 19:59 IST

ಬೆಂಗಳೂರು: ‘ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ರೂವಾರಿ ಫರೀದ್ ಹಾಗೂ ಅದರಲ್ಲಿ ಭಾಗಿಯಾಗಿರುವ ಭ್ರಷ್ಟ ರಾಜಕಾರಣಿಗಳ ರಕ್ಷಣೆಗೆ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇದರಿಂದಾಗಿ ತನಿಖೆ ದಾರಿ ತಪ್ಪುತ್ತಿದೆ’ ಎಂದು ಲಂಚ ಮುಕ್ತ ಕರ್ನಾಟಕ ವೇದಿಕೆ ಆರೋಪಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ಡೈರಿಯೊಂದು ಸಿಸಿಬಿ ಹೆಚ್ಚುವರಿ ಆಯುಕ್ತ (ಅಪರಾಧ) ಅಲೋಕ್ ಕುಮಾರ್ ಬಳಿಯಿದೆ. ಅದರಲ್ಲಿ ಪ್ರಮುಖ ರಾಜಕಾರಣಿಗಳ ಹೆಸರುಗಳಿವೆ. ಅವರನ್ನು ಬಚಾವ್‌ ಮಾಡಲು ಧಾವಂತದಲ್ಲಿ ಸರ್ಕಾರ ಹಣ ಕಳೆದುಕೊಂಡಿರುವ ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದೆ. ಡೈರಿಯಲ್ಲಿರುವ ಹೆಸರುಗಳನ್ನು ಕೂಡಲೇ ಬಹಿರಂಗಪಡಿಸಬೇಕು’ ಎಂದು ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಸಿಬಿ ಪೊಲೀಸರು ತನಿಖಾ ಪ್ರಕ್ರಿಯೆ ತಿಳಿಸಲು ಡಿಜಿಪಿ ಮತ್ತು ಗೃಹ ಸಚಿವರನ್ನು ಸಂಪರ್ಕಿಸದೆ, ನೇರವಾಗಿ ಮುಖ್ಯಮಂತ್ರಿ ಅವರನ್ನೇ ಭೇಟಿಯಾಗುತ್ತಿರುವುದೇಕೆ? ಆರೋಪಿ ಫರೀದ್‌ನನ್ನು ಬಂಧಿಸಿಲ್ಲವೇಕೆ? ಉದ್ಯಮಿ ವಿಜಯ್‌ ತಾತಾ (ಫರೀದ್‌ನಿಂದ ಹಣ ಪಡೆದವ) ಅವರ ಮನೆ ಮೇಲೆ ದಾಳಿ ನಡೆಸಿದರೂ, ಅವರನ್ನು ಈವರೆಗೂ ಬಂಧಿಸಿಲ್ಲ. ಈ ಬೆಳವಣಿಗೆಗಳು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿವೆ. ಹೀಗಾಗಿ, ಗೃಹಇಲಾಖೆ ಅಲೋಕ್‌ ಕುಮಾರ್‌ಗೆ ನೋಟಿಸ್ ಕೊಟ್ಟು ವಿವರಣೆ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ಕಂಪನಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಲಕ್ಷಾಂತರ ರೂ‍ಪಾಯಿ ಹೂಡಿಕೆ ಮಾಡಿದ್ದರು. ಈಗ ಅವರಿಗೆ ಅನ್ಯಾಯವಾಗಿದೆ. ಕೂಡಲೇ ಹಣ ವಾಪಸ್‌ ಕೊಡಿಸಬೇಕು. ಒಂದು ವೇಳೆ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ರಕ್ಷಣೆಗೆ ಮುಂದಾದರೆ ಹೋರಾಟ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

ಆರೋಪಿಸಿದ್ದಕ್ಕೆ ಬಂಧನ

‘ತಮ್ಮ ವಿರುದ್ಧ ಪತ್ರಿಕಾ ಗೋಷ್ಠಿ ನಡೆಸಿದ್ದಕ್ಕೇ ಜಯೀದ್ ಖಾನ್ ಹಾಗೂ ಸಿರಾಜುದ್ದೀನ್‌ ಎಂಬುವರನ್ನು ಅಲೋಕ್‌ ಕುಮಾರ್ ಬಂಧಿಸಿದ್ದಾರೆ. ಪ್ರಕರಣದ ಸತ್ಯಾಂಶಗಳನ್ನು ಹೇಳುವ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಜನಾರ್ದನ ರೆಡ್ಡಿ ಅವರ ಪಾತ್ರವಿಲ್ಲದಿದ್ದರೂ, ಅವರನ್ನೂ ಬಂಧಿಸಿ ಪ್ರಕರಣ ದಿಕ್ಕು ತಪ್ಪಿಸಿದ್ದಾರೆ. ಇದು ನಮ್ಮ ರಾಜ್ಯದ ಪೊಲೀಸ್‌ ವ್ಯವಸ್ಥೆ’ ಎಂದು ರವಿಕೃಷ್ಣಾರೆಡ್ಡಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.