ADVERTISEMENT

ಬೆಂಗಳೂರು: ಪಿಎಸ್‌ಐ ಮೇಲೆ ಕಾರು ಹತ್ತಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 22:16 IST
Last Updated 24 ಜನವರಿ 2024, 22:16 IST
   

ಬೆಂಗಳೂರು: ಕಾರಿನಲ್ಲಿ ಕುಳಿತು ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ, ಪಿಎಸ್‌ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ರಿಸರ್ವ್ ಸಬ್‌ಇನ್‌ಸ್ಪೆಕ್ಟರ್‌ ಮಹೇಶ್ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.

‘ಜ.20ರಂದು ಮಹೇಶ್‌ ಅವರು ಜ್ಞಾನಭಾರತಿಯ ಉಪಕಾರ್‌ ಲೇಔಟ್‌ನ ಉದ್ಯಾನದಲ್ಲಿ ವಾಯುವಿಹಾರ ನಡೆಸುತ್ತಿದ್ದರು. ಪಾರ್ಕ್‌ ಎಡಬದಿಯಲ್ಲಿ ನಿಂತಿದ್ದ ಕಾರಿನಲ್ಲಿ ಜೋಡಿಯೊಂದು ಅಸಭ್ಯವಾಗಿ ನಡೆದುಕೊಳ್ಳುತ್ತಿತ್ತು. ಇದನ್ನು ಕಂಡ ಪಿಎಸ್‌ಐ ಮಹೇಶ್‌, ಆ ಜೋಡಿಗೆ ಬುದ್ಧಿಹೇಳಲು ಮುಂದಾಗಿದ್ದಾರೆ. ಆಗ ಕಾರಿನಲ್ಲಿದ್ದ ಯುವಕ, ಹಿಂದಿನ ಸೀಟಿನಿಂದ ಮುಂದಕ್ಕೆ ಬಂದು ಏಕಾಏಕಿ ಕಾರು ಚಲಾಯಿಸಿದ್ದಾನೆ. ಕಾರಿನ ಮುಂಭಾಗದಲ್ಲಿ ನಿಂತಿದ್ದ ಮಹೇಶ್ ಆತಂಕಗೊಂಡು, ಬಾನೆಟ್ ಮೇಲೆ ಹತ್ತಿದ್ದರು. ಕಾರು ನಿಲ್ಲಿಸುವಂತೆ ಸೂಚಿಸಿದ್ದರೂ ಚಾಲಕ, ವೇಗವಾಗಿ ರಿವರ್ಸ್ ಗೇರ್ ಹಾಕಿ ಕೆಳಕ್ಕೆ ಬೀಳಿಸಲು ಪ್ರಯತ್ನಿಸಿದ್ದ. ಕೆಳಕ್ಕೆ ಬಿದ್ದ ಮಹೇಶ್‌ ಅವರ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಾಯವಾಗಿತ್ತು’ ಎಂದು ಮೂಲಗಳು ಹೇಳಿವೆ.

ADVERTISEMENT

ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇರೆಗೆ ಆರೋಪಿ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.