ADVERTISEMENT

ಕೊಲೆ ಯತ್ನ, ಸಂಚು, ಮಹಿಳೆಯ ಮಾನಹಾನಿ ಆರೋಪ: ಮುನಿರತ್ನ ವಿರುದ್ಧ ಮತ್ತೊಂದು FIR

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 0:29 IST
Last Updated 1 ಡಿಸೆಂಬರ್ 2024, 0:29 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ಕೊಲೆ ಯತ್ನ, ಸುಪಾರಿ ಮತ್ತು ಮಹಿಳೆಯ ಮಾನಹಾನಿ ಆರೋಪದಡಿ ಶಾಸಕ ಮುನಿರತ್ನ ಅವರ ವಿರುದ್ಧ ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್​ ದಾಖಲಾಗಿದೆ.

ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಮುನಿರತ್ನ, ಸುನಂದಮ್ಮ, ವೆಂಕಟೇಶ್‌, ಲಕ್ಷ್ಮಮ್ಮ, ಜಯಮ್ಮ, ಲತಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಎಸ್‌ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ದಿನವೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

‘ಪತ್ನಿ ಜತೆ ಮನೆ ದೇವರು ಕದಿರಿ ನರಸಿಂಹಸ್ವಾಮಿ ದೇವರ ದರ್ಶನಕ್ಕೆ ತೆರಳಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ನಮ್ಮನ್ನು ಹತ್ಯೆ ಮಾಡಲು ಮುನಿರತ್ನ ಸಂಚು ರೂಪಿಸಿದ್ದರು. ನಮ್ಮ ಕಾರು ಹಿಂಬಾಲಿಸಿ ಹಂತಕರಿಗೆ ಮಾಹಿತಿ ನೀಡಲು ಅಂದಿನ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಸಿದ್ದೇಗೌಡ ಅವರನ್ನು ನಿಯೋಜಿಸಿದ್ದರು. ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರು ನನ್ನ ಪ್ರವಾಸದ ಮಾಹಿತಿ ಅನ್ನು ಸಂತೋಷ್‌ಗೆ ನೀಡಿದ್ದರು. ಈ ವಿಚಾರವಾಗಿ ಸಂತೋಷ್ ತಂದೆ ಸಿದ್ದೇಗೌಡ ಅವರು ಮುನಿರತ್ನ ಜತೆ ಜಗಳವಾಡಿದ್ದರು, ಇಂತಹ ಕೃತ್ಯಗಳಿಗೆ ಮಗನನ್ನು ಬಳಸಿಕೊಳ್ಳಬೇಡಿ ಎಂದು ಹೇಳಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

’2013ರ ಡಿಸೆಂಬರ್‌ ತಿಂಗಳಲ್ಲಿ ನಾನು ಯಾವುದೇ ಗಲಾಟೆ ಮಾಡದಿದ್ದರೂ ವ್ಯಾಜ್ಯ ಬಿಡಿಸಲು ಠಾಣೆಗೆ ಹೋದ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಮುನಿರತ್ನ ಜೈಲಿಗೆ ಕಳುಹಿಸಿದ್ದರು. ಶಾಸಕರ ಸೂಚನೆಯಂತೆ ಪೊಲೀಸ್ ಸಿಬ್ಬಂದಿ ನನ್ನನ್ನು ಥಳಿಸಿ, ವಿವಸ್ತ್ರಗೊಳಿಸಿ ಚಿತ್ರ ಹಿಂಸೆ ನೀಡಿದರು. ಹಾಗಾಗಿ ಈ ಸುಳ್ಳು ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ರಮೇಶ ಜಾರಕಿಹೊಳಿ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ನನ್ನ ಸ್ನೇಹಿತ ಅರುಣ್ ಅವರನ್ನು ಅಕ್ರಮವಾಗಿ ಬಂಧಿಸಿ, ನನ್ನ ಮತ್ತು ಪತ್ನಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳನ್ನು ಮುನಿರತ್ನ ಅವರಿಗೆ ನೀಡುವಂತೆ ಒತ್ತಾಯಿಸಿದ್ದರು. ಇಲ್ಲವಾದರೆ ಈ ಹಗರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.