ಬೆಂಗಳೂರು: ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಚಾಲಕನೊಬ್ಬ ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿರುವ ಘಟನೆ ಕಸ್ತೂರಬಾ ರಸ್ತೆಯ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಚಾಲಕನನ್ನು ಅಮಾನತುಗೊಳಿಸಿ, ಬಿಎಂಟಿಸಿ ಆದೇಶ ಹೊರಡಿಸಿದೆ.
ಮೇ 23ರ ಸಂಜೆ 5.40ಕ್ಕೆ ಈ ಘಟನೆ ನಡೆದಿತ್ತು. ಘಟನೆ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಬಸ್‍ನ ಹಿಂಬದಿ ಭಾಗ ಕಾರಿಗೆ ತಾಗಿತ್ತು. ಇದರಿಂದಾಗಿ ಬಿಎಂಟಿಸಿ ಬಸ್ ಚಾಲಕ ಪ್ರಶಾಂತ್ ಮತ್ತು ಯುವತಿ ನಡುವೆ ಗಲಾಟೆಯಾಗಿತ್ತು.
ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಅನ್ನು ತಡೆದು ಚಾಲಕನನ್ನು ಪ್ರಶ್ನೆ ಮಾಡಲು ಮುಂದಾಗಿದ್ದರು. ಆದರೆ, ಈ ವೇಳೆ ಚಾಲಕ ಯುವತಿಯ ಮೇಲೆ ಬಸ್ ಹತ್ತಿಸಲು ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಯುವತಿ ಪಾರಾಗಿದ್ದಾರೆ.
ಯುವತಿಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಚಾಲಕನ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಅಮಾನತು: ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಯತ್ನಿಸಿದ್ದ ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಹಾಗೂ ಪ್ರಾಥಮಿಕ ಪರಿಶೀಲನೆಯ ವೇಳೆ ಯುವತಿ ಬಸ್ ತಡೆದಿದ್ದರೂ ಚಾಲಕ ಮುಂದಕ್ಕೆ ಚಲಾಯಿಸಲು ಯತ್ನಿಸಿರುವುದು ಕಂಡುಬಂದಿದೆ. ಇದರಿಂದ ಮಹಿಳೆಯು ತೀವ್ರ ಅಪಾಯಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಬದಿಗೆ ಸರಿದ ಕಾರಣದಿಂದ ಅಪಾಯ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಕಬ್ಬನ್‍ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.