ADVERTISEMENT

ಕನ್ನಡ ವಿಶ್ವವಿದ್ಯಾಲಯದ ಕೇಸರೀಕರಣಕ್ಕೆ ಯತ್ನ: ಬಂಜಗೆರೆ ಜಯಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:17 IST
Last Updated 30 ಜನವರಿ 2022, 19:17 IST

ಬೆಂಗಳೂರು: ‘ಕನ್ನಡ ವಿಶ್ವವಿದ್ಯಾಲಯವನ್ನು ಕೇಸರೀಕರಣಗೊಳಿಸುವ ಪ್ರಯತ್ನಗಳ ಮೂಲಕ ಸಂಸ್ಥೆಯ ಚೈತನ್ಯವನ್ನು ಕುಂದಿಸಲಾಗುತ್ತಿದೆ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ಬಂಡಾಯ ಸಾಹಿತ್ಯ ಸಂಘಟನೆ ಭಾನುವಾರ ‘ಕನ್ನಡ ವಿಶ್ವವಿದ್ಯಾಲಯದ ಸ್ಥಿತಿ–ಗತಿ‘ ಕುರಿತು ಆಯೋಜಿಸಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಕನ್ನಡ ವಿಶ್ವವಿದ್ಯಾಲಯಕ್ಕೆ ಸಿಂಡಿಕೇಟ್‌ ಸದಸ್ಯರ ನೇಮಕ, ಕ್ರಿಯಾ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ವಿಶ್ಲೇಷಿಸಿದಾಗ ಬಲಪಂಥೀಯರು ವಿಶ್ವವಿದ್ಯಾಲಯವನ್ನು ಕೇಸರೀಕರಣಗೊಳಿಸಲು ನಡೆಸುತ್ತಿರುವ ಪ್ರಯತ್ನಗಳು ತಿಳಿಯುತ್ತವೆ‘ ಎಂದರು.

’ಕನ್ನಡದ ಅರಿವು ವಿಸ್ತರಿಸುವ ಜತೆ ಹಿರಿಮೆ ಹೆಚ್ಚಿಸಿದ ವಿಶ್ವವಿದ್ಯಾಲಯದಲ್ಲಿ ಈಗ ಮುಕ್ತ ಚಿಂತನೆಗಳಿಗೆ ಅವಕಾಶಗಳು ಇಲ್ಲದಂತಹ ವಾತಾವರಣ ಸೃಷ್ಟಿಯಾಗುತ್ತಿದೆ‘ ಎಂದರು.

ADVERTISEMENT

’ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೂ ನೀಡುತ್ತಿಲ್ಲ. ಸಂಸ್ಕೃತ ವಿಶ್ವವಿದ್ಯಾಲ
ಯಕ್ಕೆ ಸಾಕಷ್ಟು ಅನುದಾನ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಕನ್ನಡದ ಭಾಷೆಗಾಗಿಯೇ ಮೀಸಲಾಗಿರುವ ಏಕೈಕ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ’ಕನ್ನಡ ವಿಶ್ವ ವಿದ್ಯಾಲಯದ ಬಗ್ಗೆ ಚರ್ಚಿಸುವ ಪರಿಸ್ಥಿತಿ ಬಂದಿರುವುದೇ ವಿಪರ್ಯಾಸ. ಕನ್ನಡ ವಿಶ್ವವಿದ್ಯಾಲಯದ ಸ್ವರೂಪಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ತಾರದೇ ಬೆಳೆಸಬೇಕು‘ ಎಂದು ಸಲಹೆ ನೀಡಿದರು.

’ಬಹುಪಾಲು ವಿಶ್ವವಿದ್ಯಾಲಯಗಳು ಇಂದು ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿವೆ. ಕಾಲೇಜು ರೀತಿಯಲ್ಲಿ ಈ ವಿಶ್ವವಿದ್ಯಾಲಯಗಳು ನಡೆಯುತ್ತಿದ್ದು, ಗುಣಮಟ್ಟ ಕ್ಷೀಣಿಸುತ್ತಿದೆ. ಈಗಿರುವ ವಿಶ್ವವಿದ್ಯಾಲಯಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕಾಗಿದೆ. ವಿಶ್ವವಿದ್ಯಾಲಯಗಳ ಸಂಖ್ಯೆ ಮುಖ್ಯವಲ್ಲ. ಸತ್ವ ಮುಖ್ಯ. ಎಂತಹ ಶಿಕ್ಷಣ ನೀಡುತ್ತವೆ ಎನ್ನುವುದು ಮುಖ್ಯ. ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳ ಜತೆಗೆ ಸರ್ಕಾರವೂ ಜವಾಬ್ದಾರಿಯಾಗಬೇಕು‘ ಎಂದರು.

’ಕನ್ನಡ ವಿಶ್ವವಿದ್ಯಾಲಯ ಕೇವಲ ಸಂಶೋಧನೆಗೆ ಮೀಸಲಾಗಿದೆ ಎನ್ನುವ ತಪ್ಪು ಕಲ್ಪನೆ ಇದೆ. ಸಂಶೋಧನೆ ಪ್ರಧಾನವಾದ ವಿಶ್ವವಿದ್ಯಾಲಯ ಎನ್ನುವುದು ನಿಜ. ಆದರೆ, ಇಲ್ಲಿ ಸಂಶೋಧನೆಯ ಜತೆಗೆ ಬೋಧನೆಯನ್ನು ಒಳಗೊಂಡಿದೆ‘ ಎಂದು ವಿವರಿಸಿದರು.

’ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಸಕಾಲಕ್ಕೆ ಅನುದಾನ ನೀಡುತ್ತಿಲ್ಲ. ಸರ್ಕಾರವೇ ಆರ್ಥಿಕವಾಗಿ ಪೋಷಿಸದಿದ್ದರೆ ಹೇಗೆ? ಮುಖ್ಯಮಂತ್ರಿ ಅವರು ಈ ಬಗ್ಗೆ ಗಮನಹರಿಸಬೇಕು. ಮುಂಬರುವ ಬಜೆಟ್‌ನಲ್ಲಾದರೂ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಬಲ ತುಂಬಬೇಕು‘ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.