ADVERTISEMENT

ದೇಶದ್ರೋಹ ಕಾಯ್ದೆ ರದ್ದತಿಗೆ ಜನಾಂದೋಲನ ನಡೆಯಲಿ: ನಾಗಮೋಹನದಾಸ್

‘ಆಗಸ್ಟ್ ಮಾಸದ ರಾಜಕೀಯ ಕಥನ’ ‍ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:44 IST
Last Updated 6 ಡಿಸೆಂಬರ್ 2021, 5:44 IST
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ಅವರು ‘ಆಗಸ್ಟ್ ಮಾಸದ ರಾಜಕೀಯ ಕಥನ’ ಪುಸ್ತಕ ಬಿಡುಗಡೆ ಮಾಡಿದರು. ಪ್ರಕಾಶಕ ನಂದೀಶ್‌ ದೇವ್, ಬಿ.ಎಂ.ಹನೀಫ್, ಕೃತಿಯ ಲೇಖಕಿ ಪಲ್ಲವಿ ಇಡೂರು ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ಅವರು ‘ಆಗಸ್ಟ್ ಮಾಸದ ರಾಜಕೀಯ ಕಥನ’ ಪುಸ್ತಕ ಬಿಡುಗಡೆ ಮಾಡಿದರು. ಪ್ರಕಾಶಕ ನಂದೀಶ್‌ ದೇವ್, ಬಿ.ಎಂ.ಹನೀಫ್, ಕೃತಿಯ ಲೇಖಕಿ ಪಲ್ಲವಿ ಇಡೂರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ್ರೋಹ ಕಾಯ್ದೆಯನ್ನು ಕಾನೂನಿನ ಪುಸ್ತಕದಿಂದಲೇ ತೆಗೆದುಹಾಕಲು ಜನಾಂದೋಲನ ರೂಪುಗೊಳ್ಳಬೇಕಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ್ ಪ್ರತಿಪಾದಿಸಿದರು.

ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಲ್ಲವಿ ಇಡೂರು ಅವರ ‘ಆಗಸ್ಟ್ ಮಾಸದ ರಾಜಕೀಯ ಕಥನ’ ‍ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟ ದಮನಿಸಲು ಬ್ರಿಟಿಷರು ಜಾರಿಗೆ ತಂದಿದ್ದ ದೇಶದ್ರೋಹ ಕಾಯ್ದೆ ಇಂದಿಗೂ ಜಾರಿಯಲ್ಲಿದೆ. ಅಧಿಕಾರಸ್ಥರನ್ನು ಪ್ರಶ್ನಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಸಂವಿಧಾನದಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಾನವಹಕ್ಕು, ಮೂಲಭೂತಹಕ್ಕು, ಪ್ರಜಾಪ್ರಭುತ್ವ ಮತ್ತು ವಾಕ್‌ ಸ್ವಾತಂತ್ರ್ಯಕ್ಕೆ ವಿರುದ್ಧವಾದ ದೇಶದ್ರೋಹ ಕಾಯ್ದೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ’ ಎಂದರು.

ADVERTISEMENT

‘ಸಾಹಿತಿ, ಕಲಾವಿದರು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಮಾಜ ಸೇವಕರು, ಹೋರಾಟಗಾರರನ್ನು ಜೈಲಿಗೆ ಕಳುಹಿಸಲು ಈ ಕಾಯ್ದೆಯ ದುರ್ಬಳಕೆಯಾಗುತ್ತಿದೆ. ಈ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್‌ 1967ರಲ್ಲೇ ಕೆಲ ಮಾನದಂಡಗಳನ್ನು ರೂಪಿಸಿದೆ. ಅವುಗಳನ್ನೂ ಉಲ್ಲಂಘನೆ ಮಾಡಲಾಗುತ್ತಿದೆ’ ಎಂದರು.

‘ದೇಶದ್ರೋಹ ಕಾಯ್ದೆ ವಿರುದ್ಧ ಜನಾಂದೋಲನ ಗಟ್ಟಿಯಾಗಬೇಕಿದೆ. ಜನಪರ ಚಳವಳಿಗಳಿಗೆ ಉತ್ತರ ಸಿಗಲಿದೆ ಎಂಬುದನ್ನು ರೈತ ಚಳವಳಿ ಸಾಬೀತು ಮಾಡಿದೆ’ ಎಂದು ಹೇಳಿದರು.

‘ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ನ್ಯಾಯಾಂಗ ನಿಂದನೆ ಕಾಯ್ದೆಗಳಿಗೂ ತಿದ್ದುಪಡಿ ತರುವ ಅಗತ್ಯವಿದೆ. ಒಂದು ಚೌಕಟ್ಟಿನೊಳಗೆ ನ್ಯಾಯಾಂಗವನ್ನೂ ವಿಮರ್ಶೆ ಮಾಡುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ. ಹನೀಫ್ ಪುಸ್ತಕದ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.