ADVERTISEMENT

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಯುವತಿಗೆ ನಿಂದನೆ: ಆಟೊ ಚಾಲಕ ಸೆರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 14:41 IST
Last Updated 12 ಅಕ್ಟೋಬರ್ 2025, 14:41 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಆ್ಯಪ್​ನಲ್ಲಿ ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನು ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಆಟೊ ಚಾಲಕನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈಶಾನ್ಯ ಭಾರತದ ಯುವತಿ ನೀಡಿದ ದೂರಿನ ಮೇರೆಗೆ ಆಟೊ ಚಾಲಕ ಪವನ್ (21) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ನಗರದ ಕ್ಯಾಲಸೇನಹಳ್ಳಿಯ ಹನುಮಂತಪ್ಪ ಬಡಾವಣೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದು, ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಅಕ್ಟೋಬರ್ 2ರಂದು ಕ್ಯಾಲಸೇನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಮೊಬೈಲ್ ಆ್ಯಪ್‌ನಲ್ಲಿ ಆಟೊ ಬುಕ್ ಮಾಡಿಕೊಂಡಿದ್ದೆ. ಆದರೆ, ಆ್ಯಪ್‌ನಲ್ಲಿ ಪಿಕಪ್ ಪಾಯಿಂಟ್ ತೋರಿಸಲಿರಲಿಲ್ಲ. ಐದು ನಿಮಿಷ ಕಾದರೂ ಆಟೊ ಬರಲಿಲ್ಲ. ಹಾಗಾಗಿ ಬುಕ್ಕಿಂಗ್ ರದ್ದು ಮಾಡಿ ಬೇರೆ ಆಟೊದಲ್ಲಿ ಹೊರಟೆ’ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.

‘ಕೆಲ ಹೊತ್ತಿನ ಬಳಿಕ ರದ್ದು ಮಾಡಿದ್ದ ಆಟೊ ಚಾಲಕ ಪವನ್ ನಾನು ಪ್ರಯಾಣಿಸುತ್ತಿದ್ದ ಮತ್ತೊಂದು ಆಟೊವನ್ನು ಹಿಂಬಾಲಿಸಿ ಅಡ್ಡಗಟ್ಟಿದ್ಧ. ಏಕಾಏಕಿ ಬಂದು ಯಾಕೆ ಕ್ಯಾನ್ಸಲ್ ಮಾಡಿದ್ದೆ ಎಂದು ಪ್ರಶ್ನಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆ, ಮೊಬೈಲ್‌ನಲ್ಲಿ ಆತ ವಿಡಿಯೊ ಮಾಡಿಕೊಂಡಿದ್ದ’ ಎಂದು ಯುವತಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆ ಯುವತಿಯು ಕೊತ್ತನೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.