ADVERTISEMENT

ಬೆಂಗಳೂರು: ಪ್ರಯಾಣಿಕರ ನಗದು ಕಳ್ಳತನ– ಆಟೊ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 8:35 IST
Last Updated 28 ಅಕ್ಟೋಬರ್ 2022, 8:35 IST
ಆಟೊ ಚಾಲಕ ಪವನ್
ಆಟೊ ಚಾಲಕ ಪವನ್   

ಬೆಂಗಳೂರು: ₹ 1.65 ಲಕ್ಷ ನಗದು ಇದ್ದ ಪ್ರಯಾಣಿಕರ ಬ್ಯಾಗ್‌ ಕಳ್ಳತನ ಮಾಡಿದ್ದ ಆರೋಪದಡಿ ಆಟೊ ಚಾಲಕ ಪವನ್ ಎಂಬುವವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿಜಯನಗರದ‌ ಮೂಡಲಪಾಳ್ಯ ನಿವಾಸಿ ಪವನ್, ಸೇನೆ ಅಧಿಕಾರಿಯೊಬ್ಬರ ಬ್ಯಾಗ್ ಕದ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆಟೊ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ₹ 1.65 ಲಕ್ಷ ನಗದು ಹಾಗೂ ಬಟ್ಟೆಗಳ ಸಮೇತ ಎರಡು ಬ್ಯಾಗ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಉತ್ತರ ಭಾರತದ ನಿವಾಸಿಯಾಗಿರುವ ಸೇನೆ ಅಧಿಕಾರಿ, ಅ. 14ರಂದು ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದರು. ಗಂಗಮ್ಮನ ಗುಡಿ ವೃತ್ತದಿಂದ ಶಾಂತಿನಗರಕ್ಕೆ ಹೋಗಲು ಆರೋಪಿ ಪವನ್ ಆಟೊ ಹತ್ತಿದ್ದರು. ಬಳ್ಳಾರಿ ರಸ್ತೆಯ ಗಂಗೇನಹಳ್ಳಿ ಬಳಿ ಆಟೊ ನಿಲ್ಲಿಸಿದ್ದ ಸೇನಾಧಿಕಾರಿ, ಕುಡಿಯಲು ನೀರು ತರಲೆಂದು ಅಂಗಡಿಗೆ ಹೋಗಿದ್ದರು. ಇದೇ ವೇಳೆಯೇ ಆರೋಪಿ, ಆಟೊ ಸಮೇತ ಪರಾರಿಯಾಗಿದ್ದ’ ಎಂದು ತಿಳಿಸಿದರು.

ADVERTISEMENT

ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ: ‘ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಆರೋಪಿಯಾಗಿದ್ದ ಪವನ್‌ನನ್ನು ಬಂಧಿಸಿ ಐಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದಿದ್ದ ಈತ, ಆಟೊ ಚಾಲನೆ ಮಾಡುತ್ತಿದ್ದ’ ಎಂದು ಹೇಳಿದರು.

‘ಹೆಚ್ಚು ಹಣ ಸಂಪಾದಿಸಬೇಕೆಂದು ಆರೋಪಿ ಕಳ್ಳತನ ಮಾಡಲು ಸಂಚು ರೂಪಿಸುತ್ತಿದ್ದ. ಗಂಗಮ್ಮನ ಗುಡಿ ವೃತ್ತದ ಬಳಿ ದೂರುದಾರ ಲಗೇಜು ಸಮೇತ ನಿಂತಿದ್ದನ್ನು ಆರೋಪಿ ನೋಡಿದ್ದ. ಅವರ ಬಳಿ ಹೋಗಿ ಆಟೊದಲ್ಲಿ ಹತ್ತಿಸಿಕೊಂಡು ಕೃತ್ಯ ಎಸಗಿದ್ದ. ಆರೋಪಿ ಈಗ ಪುನಃ ಜೈಲುಪಾಲಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.