ADVERTISEMENT

ಆಟೊ ಚಾಲಕನ ಕೊಲೆ: ಪತ್ನಿಯೇ ಸೂತ್ರಧಾರಿ?

ಪ್ರಿಯಕರನ ಜತೆ ಅಕ್ರಮ ಸಂಬಂಧ ಹೊಂದಿದ ಶಂಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 2:56 IST
Last Updated 27 ಫೆಬ್ರುವರಿ 2020, 2:56 IST
ವಿನೋದ್‌
ವಿನೋದ್‌   

ಬೆಂಗಳೂರು: ಮಕ್ಕಳನ್ನು ಶಾಲೆಗೆ ಬಿಟ್ಟು ಮರಳುತ್ತಿದ್ದ ಆಟೊ ಚಾಲಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ಶಾಂಪುರ ರೈಲ್ವೆ ನಿಲ್ದಾಣ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಸ್ಥಳೀಯ ನಿವಾಸಿ ವಿನೋದ್‌ ಅಲಿಯಾಸ್‌ ಗುಂಡ (33) ಕೊಲೆಯಾದ ಚಾಲಕ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿನೋದ್‌ ಪತ್ನಿ ಅನಿತಾ ಈ ಕೃತ್ಯದ ಹಿಂದೆ ಇದ್ದು, ಪ್ರಿಯಕರ ನಾರಾಯಣ ಗೌಡನ ಜೊತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ನಾರಾಯಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಚಾಕು ಇರಿದಿರುವ ರಾಜ, ವಿಜಯವಾಡ
ದವನು. ಆತನನ್ನು ಬಂಧಿಸಲು ವಿಜಯ
ವಾಡಕ್ಕೆ ಪೊಲೀಸರು ತೆರಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಎಸ್‌.ಡಿ. ಶರಣಪ್ಪ, ‘ಕೊಲೆಯಾದ ವಿನೋದ್‌ಗೆ ಅಪರಾಧ ಹಿನ್ನೆಲೆ ಇಲ್ಲ. ಪ್ರಯಾಣಿಕನಂತೆ ಬಂದು ಆಟೊದ ಹಿಂಬದಿಯಲ್ಲಿ ಕುಳಿತಿದ್ದ ರಾಜ ಎಂಬಾತ ಕೊಲೆ ಮಾಡಿದ್ದಾನೆ. ಕೃತ್ಯಕ್ಕೆ ನಾರಾ
ಯಣ್‌ ಸಾಥ್‌ ಕೊಟ್ಟಿದ್ದಾನೆ’ ಎಂದರು.

ADVERTISEMENT

12 ವರ್ಷಗಳ ಹಿಂದೆ ವಿನೋದ್‌ – ಅನಿತಾ ವಿವಾಹ ನಡೆದಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ. ವಿನೋದ್ ಅವರ ಪೋಷಕರ ಜೊತೆ ಅನಿತಾ ಜಗಳವಾಡಿದ್ದರು. ಅನಿತಾ ಜೊತೆ ಅಳಿಯ ವಿನೋದ್ ಅವರನ್ನು ಅತ್ತೆ ಸುಶೀಲಮ್ಮ (ಅನಿತಾ ತಾಯಿ) ಹೊಸಕೋಟೆ ಬಳಿಯ ಅವಲಹಳ್ಳಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಅನಿತಾಗೆ ನಾರಾಯಣ್ ಗೌಡನ ಪರಿಚಯವಾಗಿತ್ತು ಎಂದು ಗೊತ್ತಾಗಿದೆ.

ಅನಿತಾ ಮತ್ತು ನಾರಾಯಣ್ ಗೌಡ ನಡುವೆ ಅಕ್ರಮ ಸಂಬಂಧ ಇತ್ತು ಎಂದೂ ಹೇಳಲಾಗಿದೆ. ಈ ವಿಷಯ ಗೊತ್ತಾದ ಬಳಿಕ, ಪತ್ನಿಗೆ ಬುದ್ದಿಮಾತು ಹೇಳಿದ ವಿನೋದ್‌, ಆಕೆಯನ್ನು ಶಾಂಪುರಕ್ಕೆ ಮರಳಿ ಕರೆದುಕೊಂಡು ಬಂದಿದ್ದ‌ರು. ಆದರೆ, ನಾರಾಯಣ್ ಗೌಡನ ಜೊತೆ ಅನಿತಾ ಅಕ್ರಮ ಸಂಬಂಧ ಮುಂದುವರಿಸಿದ್ದಳು. ಈ ಸಂಬಂಧಕ್ಕೆ ವಿನೋದ್ ಅಡ್ಡಿ ಬರುತ್ತಾನೆ ಎಂಬ ಕಾರಣಕ್ಕೆ ಸಂಚು ರೂಪಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಅನಿತಾ ನಾಪತ್ತೆಯಾಗಿದ್ದರು. ಈ ಬಗ್ಗೆ ಡಿ.ಜೆ ಹಳ್ಳಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಪೊಲೀಸರು ಅನಿತಾ ಅವರನ್ನು ಪತ್ತೆ ಮಾಡಿದ್ದರು ಎಂದೂ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.