ADVERTISEMENT

ಬೆಂಗಳೂರು: ಆಟೊ ಚಾಲಕರು, ರ್‍ಯಾಪಿಡೊ ಸವಾರರ ಸಂಘರ್ಷ

ಮೆಟ್ರೊ, ಬಸ್‌ ನಿಲ್ದಾಣದತ್ತ ಬರಲು ರ್‍ಯಾಪಿಡೊ ರೈಡರ್‌ಗಳಿಗೆ ಭಯ

ಅದಿತ್ಯ ಕೆ.ಎ.
Published 12 ಮಾರ್ಚ್ 2023, 23:53 IST
Last Updated 12 ಮಾರ್ಚ್ 2023, 23:53 IST
ಮೆಟ್ರೊ ನಿಲ್ದಾಣದ ಬಳಿ ಆಟೊಗಳು
ಮೆಟ್ರೊ ನಿಲ್ದಾಣದ ಬಳಿ ಆಟೊಗಳು   

ಬೆಂಗಳೂರು: ಸಾಮಾನ್ಯ ಆಟೊ ಚಾಲಕರು ಹಾಗೂ ರ್‍ಯಾಪಿಡೊ ಬೈಕ್‌ ಸವಾರರ ನಡುವಿನ ಸಂಘರ್ಷವು ನಗರದಲ್ಲಿ ತೀವ್ರಗೊಂಡಿದೆ. ದಿನದಿಂದ ದಿನಕ್ಕೆ ಈ ಸಂಘರ್ಷವು ಹೆಚ್ಚಾಗುತ್ತಿದೆ.

ಇಂದಿರಾನಗರದ ಮೆಟ್ರೊ ನಿಲ್ದಾಣದಲ್ಲಿ ರ್‍ಯಾಪಿಡೊ ಸವಾರನಿಗೆ ಆಟೊ ಚಾಲಕನೊಬ್ಬ ಬೆದರಿಕೆ ಹಾಕಿ ಹೆಲ್ಮೆಟ್‌ ಪುಡಿಗಟ್ಟಿದ್ದ ಪ್ರಕರಣದ ಬಳಿಕ ಹೆದರಿರುವ ರ್‍ಯಾಪಿಡೊ ರೈಡರ್‌ಗಳು ನಿಲ್ದಾಣದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.

ಎರಡು ತಿಂಗಳಲ್ಲಿ ವಾಗ್ವಾದದ ಮೂರು ಘಟನೆಗಳು ನಡೆದಿವೆ. ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ರೊಪೆನ್‌ ಸಂಸ್ಥೆಯ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಚಾಲಕ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಹಲವು ವರ್ಷಗಳಿಂದ ಆಟೊ ಓಡಿಸುತ್ತಲೇ ಬದುಕು ಕಟ್ಟಿಕೊಂಡಿದ್ದ ನಮಗೆ ರ್‍ಯಾಪಿಡೊ ಸೇವೆಯಿಂದ ಬರೆ ಬಿದ್ದಿದೆ’ ಎಂಬುದು ಸಾಮಾನ್ಯ ಆಟೊ ಚಾಲಕರ ಅಳಲು.

ಅನೇಕ ನಿಲ್ದಾಣಗಳಲ್ಲಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿಯಿಂದ ಬಂದು ರ್‍ಯಾಪಿಡೊ ಬೈಕ್ ಸೇವೆ ಕಲ್ಪಿಸುತ್ತಿರುವ ಯುವಕರು ಹಾಗೂ ಕಂಪನಿಗಳ ಮೇಲೆ ಸ್ಥಳೀಯ ಸಾಮಾನ್ಯ ಆಟೊ ಚಾಲಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ, ಓಲಾ ಸೇವೆ ನೀಡುತ್ತಿರುವ ಆಟೊ ಚಾಲಕರಿಂದ ವಿರೋಧ ವ್ಯಕ್ತವಾಗಿಲ್ಲ.

‘ಥಳಿಸುವ ಭಯ’: ‘ಆಟೊ ಚಾಲಕರು ನಮ್ಮನ್ನು ಕಂಡರೆ ನಿಂದಿಸುತ್ತಿದ್ದಾರೆ. ಅದೇ ಕಾರಣಕ್ಕೆ ದೂರದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿದ್ದೇವೆ. ಆ್ಯಪ್‌ನಲ್ಲಿ ಬೈಕ್‌ ಬುಕ್‌ ಮಾಡಿದವರನ್ನು ಆಟೊ ನಿಲ್ದಾಣದಿಂದ ದೂರಕ್ಕೆ ಬರಲು ಹೇಳುತ್ತಿದ್ದೇವೆ’ ಎಂದು ರ್‍ಯಾಪಿಡೊ ಚಾಲಕರೊಬ್ಬರು ಹೇಳಿದರು.

ಕಡಿಮೆ ದರ: ಮೊಬೈಲ್‌ ಆ್ಯಪ್ ಆಧಾರಿತ ದ್ವಿಚಕ್ರ ವಾಹನ, ಟ್ಯಾಕ್ಸಿ ಸೇವೆಗಳು ನಗರದಲ್ಲಿವೆ. ಆಟೊ, ಟ್ಯಾಕ್ಸಿಗಿಂತಲೂ ಈ ಬೈಕ್‌ಗಳು ಕಡಿಮೆ ದರಕ್ಕೆ ಸೇವೆ ಒದಗಿಸುತ್ತವೆ. ಇದೇ ಕಾರಣಕ್ಕೆ ಪ್ರಯಾಣಿಕರು ಬಸ್‌ ಹಾಗೂ ಮೆಟ್ರೊ ಇಳಿದು ಈ ಬೈಕ್‌ಗಳ ಮೊರೆ ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಬೈಕ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆಟೊ ಚಾಲಕರಿಗೆ ಸಿಟ್ಟು ತರಿಸಿದೆ. ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆನ್‌ಲೈನ್‌ನಲ್ಲಿ ರ್‍ಯಾಪಿಡೊ ಬೈಕ್‌ ಬುಕ್‌ ಮಾಡಿದರೆ ಕೆಲವೇ ನಿಮಿಷದಲ್ಲಿ ಬೈಕ್‌ನಲ್ಲಿ ಬಂದು ಕರೆದೊಯ್ಯುವ ವ್ಯವಸ್ಥೆ ಇದಾಗಿದೆ.

‘ಕರೆದ ಸ್ಥಳಕ್ಕೆ ಆಟೊಗಳು ಸೇವೆ ಕಲ್ಪಿಸುವುದಿಲ್ಲ. ಕೆಲವು ಸ್ಥಳಕ್ಕೆ ಬರಲು ದುಪ್ಪಟ್ಟು ಬಾಡಿಗೆ ಕೇಳುತ್ತಾರೆ. ಅದೇ ಕಾರಣಕ್ಕೆ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಪಡೆಯುತ್ತಿದ್ದೇವೆ’ ಎಂದು ಪ್ರಯಾಣಿಕರು ಹೇಳುತ್ತಾರೆ.

‘ಘಟನೆಯಿಂದ ಭಯ’
‘ಮಾರ್ಚ್‌ 1ರಂದು ಮಾರತಹಳ್ಳಿಯಿಂದ ಇಂದಿರಾನಗರಕ್ಕೆ ಪ್ರಯಾಣಿಕರೊಬ್ಬರನ್ನು ಡ್ರಾಪ್‌ ಮಾಡಲು ಇಂದಿರಾನಗರಕ್ಕೆ ಬಂದಿದ್ದೆ. ಅದನ್ನು ಕಂಡ ಆಟೊ ಚಾಲಕರೊಬ್ಬರು ನನ್ನನ್ನು ತಡೆದು ಹೆಲ್ಮೆಟ್‌ ಕಿತ್ತುಕೊಂಡು ನೆಲಕ್ಕೆ ಹಾಕಿ, ನಿಂದಿಸಿದ್ದಾರೆ. ಜತೆಗೆ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಕ್ಕೆ ಹಾಕಿದ್ದಾರೆ. ಈ ಘಟನೆಯಿಂದ ಭಯವಾಗುತ್ತಿದೆ’ ಎಂದು ರ್‍ಯಾಪಿಡೊ ರೈಡರ್‌ ಜೀತ್‌ ತಿಳಿಸಿದರು.

*

ರ್‍ಯಾಪಿಡೊ ಬೈಕ್‌ಗಳು ಕಡಿಮೆ ದರಕ್ಕೆ ಸೇವೆ ನೀಡುತ್ತಿವೆ. ಅದೇ ದರಕ್ಕೆ ನಾವು ಬಾಡಿಗೆಗೆ ತೆರಳಿದರೆ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ
–ನಯಾಜ್‌, ಆಟೊ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.