ಬೆಂಗಳೂರು: ನಗರದಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೊ ಚಾಲಕರು, ಸಹಾಯಕರು, ಲೋಡರ್‌ಗಳನ್ನು ನೇರ ವೇತನ ಪದ್ಧತಿಯಡಿ ತರಬೇಕು ಹಾಗೂ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಜೂನ್ 24ರಿಂದ ಕೆಲಸ ಸ್ಥಗಿತಗೊಳಿಸಿ, ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ವಾಹನಗಳ ಚಾಲಕರು, ಸಹಾಯಕರು, ಲೋಡರ್‌ಗಳನ್ನು ನೇರ ವೇತನ ಪದ್ಧತಿಗೆ ತಂದು, ಕಾಯಂಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದರು. ಆದರೆ ಈವರೆಗೆ ಈಡೇರಿಸಿಲ್ಲ. ಹೀಗಾಗಿ, ಹೋರಾಟ ನಡೆಸಲಿದ್ದೇವೆ’ ಎಂದು ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ಅಧ್ಯಕ್ಷ ತ್ಯಾಗರಾಜ್ ತಿಳಿಸಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ತ್ಯಾಗರಾಜ್, ‘ನಮ್ಮ ಬೇಡಿಕೆಯನ್ನು ಈಡೇರಿಸದೆ ತ್ಯಾಜ್ಯ ವಿಲೇವಾರಿಗೆ ಹೊಸದಾಗಿ ಟೆಂಡರ್ ಕರೆಯಲಾಗಿದೆ. ನೀವು ನೀಡಿರುವ ಹೇಳಿಕೆ ಹಾಗೂ ಭರವಸೆಗಳಿಗೆ ಇದು ವಿರುದ್ಧವಾಗಿದೆ. ಹೀಗಾಗಿ, ಘನತ್ಯಾಜ್ಯ ವಾಹನ ಚಾಲಕರು, ಸಹಾಯಕರು, ಲೋಡರ್‌ಗಳನ್ನು ಹೊರತುಪಡಿಸಿ, ಆಟೊ ಟಿಪ್ಪರ್, ಕಾಂಪ್ಯಾಕ್ಟರ್ ಲಾರಿ ವಾಹನಗಳ ನಿರ್ವಹಣೆಗೆ ಮಾತ್ರ ಟೆಂಡರ್ ಆಹ್ವಾನಿಸಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಮನವಿ ಮಾಡಿದ್ದಾರೆ.
‘ಇದು ಸಾಧ್ಯವಾಗದಿದ್ದರೆ, ಈಗ ಕಾರ್ಯ ನಿರ್ವಹಿಸುತ್ತಿರುವ ಚಾಲಕರು, ಸಹಾಯಕರು, ಲೋಡರ್‌ಗಳೇ ಸ್ವಂತವಾಗಿ ಆಟೊ ಟಿಪ್ಪರ್, ಕಾಂಪ್ಯಾಕ್ಟರ್‌ಗಳನ್ನು ನಿರ್ವಹಣೆ ಮಾಡುವ ಯೋಜನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಕೋರಿದ್ದಾರೆ.
‘2024ರ ಡಿಸೆಂಬರ್‌ನಲ್ಲಿ ನಾವು ಪ್ರತಿಭಟನೆ ನಡೆಸಿದ್ದಾಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆಗ ಹೋರಾಟವನ್ನು ವಾಪಸ್ ಪಡೆದಿದ್ದೆವು. ಐದು ತಿಂಗಳಾದರೂ ಆ ಬಗ್ಗೆ ಕ್ರಮವಾಗಿಲ್ಲ. ಹೀಗಾಗಿ, ಹೋರಾಟಕ್ಕೆ ಮುಂದಾಗಿದ್ದೇವೆ. ಶಿವಕುಮಾರ್ ಅವರಿಗೂ ಮನವಿ ನೀಡಿದ್ದೇವೆ. ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ’ ಎಂದು ತ್ಯಾಗರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.