ADVERTISEMENT

ಹದಗೆಟ್ಟ ಮಾನವ ಗುಂಡಿಗಳು: ಅವೆನ್ಯೂ ರಸ್ತೆ ಕೊಳಚೆಮಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 5:18 IST
Last Updated 20 ಅಕ್ಟೋಬರ್ 2021, 5:18 IST
ಅವೆನ್ಯೂ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಹಾಳಾಗಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದು.
ಅವೆನ್ಯೂ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಹಾಳಾಗಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದು.   

ಬೆಂಗಳೂರು: ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವ ನಗರದ ಅವೆನ್ಯೂ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿರುವ ಕಾರಣ ಎರಡು ವಾರಗಳಿಂದ ರಸ್ತೆಯ ಮೇಲೆಲ್ಲ ಕೊಳಚೆ ನೀರು ಹರಿಯುತ್ತಿದೆ. ‘ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಇಲ್ಲಿನ ವರ್ತಕರು ದೂರಿದ್ದಾರೆ.

ಈ ದುರ್ನಾತ ಬೀರುವ ರಸ್ತೆಯಲ್ಲಿ ಗ್ರಾಹಕರು ಸಂಚರಿಸಲು ಅಸಹ್ಯಪಡುತ್ತಾರೆ. ಇದರಿಂದ ವ್ಯಾಪಾರವೂ ಸರಿಯಾಗಿ ನಡೆಯುತ್ತಿಲ್ಲ. ಕಾಮಗಾರಿಗಳೇ ಜನರಿಗೆ ತಲೆನೋವಾಗಿ ಪರಿಣಮಿಸಿವೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೂ ಮುನ್ನ ರಸ್ತೆಯಲ್ಲಿ ಈ ದುಸ್ಥಿತಿ ಇರಲಿಲ್ಲ. ಕಾಮಗಾರಿಗಳು ನಡೆಯುತ್ತಿರುವುದರಿಂದ ಒಳಚರಂಡಿ ವ್ಯವಸ್ಥೆಯ ಸಂಪರ್ಕ ಹಾಳಾಗಿದೆ. ಕಿಲಾರಿ ರಸ್ತೆಯ ಜಂಕ್ಷನ್‌ನಿಂದ ಶುರುವಾಗಿ ಚಿಕ್ಕಪೇಟೆ ವೃತ್ತ ಸಂಪರ್ಕಿಸುವ ರಸ್ತೆಯವರೆಗೆ ಮೂರು ಸ್ಥಳಗಳಲ್ಲಿ ಮಾನವಗುಂಡಿ (ಮ್ಯಾನ್‌ಹೋಲ್‌) ಗುಂಡಿಗಳು ಕಟ್ಟಿಕೊಂಡು ರಸ್ತೆಯ ಮೇಲೆ ನೀರು ಹರಿಯುತ್ತಿದೆ’ ಎಂದು ಅವೆನ್ಯೂ ರಸ್ತೆಯ ಶಾಂತಿ ಮೆಡಿಕಲ್ಸ್‌ನ ವಿವೇಕ್ ದೂರಿದರು.

ADVERTISEMENT

‘ಸ್ಮಾರ್ಟ್‌ ಸಿಟಿ ಕಾಮಗಾರಿಯ ಗಡುವು ವಿಸ್ತರಣೆಯಾಗುತ್ತಲೇ ಇದೆ. ಮ್ಯಾನ್‌ಹೋಲ್‌ ದುರಸ್ತಿ ವಿಳಂಬದ ಕುರಿತು ಜಲಮಂಡಳಿಯ ಅಧಿಕಾರಿಗಳರನ್ನು ವಿಚಾರಿಸಿದರೆ, ಅವರು ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ. ಸ್ಮಾರ್ಟ್‌ಸಿಟಿ ಲಿಮಿಟೆಡ್‌ನವರು ಜಲಮಂಡಳಿಯತ್ತ ಕೈ ತೋರಿಸುತ್ತಾರೆ. ಈ ಸಮಸ್ಯೆ ನಿವಾರಿಸುವ ಬಗ್ಗೆ ಎರಡೂ ಸಂಸ್ಥೆಗಳು ಹೊಣೆ ಹೊರುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಶೌಚ ಗುಂಡಿಗಳ ದುರಸ್ತಿಗೆಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಹಲವು ಬಾರಿ ಅವರ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತಾರೆ’ ಎನ್ನುತ್ತಾರೆ ಅವೆನ್ಯೂ ರಸ್ತೆಯಲ್ಲಿರುವ ಫೋಟೊಗ್ರಾಫಿ ಸ್ಟುಡಿಯೊವೊಂದರ ಸಿಬ್ಬಂದಿ ವಿಶಾಲ್‌.

‘ಈ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳು ಇದ್ದೂ ಇಲ್ಲದಂತಿವೆ.ಕೊಳಚೆ ಹರಿಯುವ ರಸ್ತೆಯಲ್ಲೇ ಪ್ರತಿದಿನ ನಡೆಯುವುದು ಅನಿವಾರ್ಯವಾಗಿದೆ. ಮಳೆ ಬಂದರಂತೂ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಲಾಗದು. ಸ್ಮಾರ್ಟ್‌ಸಿಟಿ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಂಡರೆ, ನಿರಾತಂಕವಾಗಿ ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಸದ್ಯಕ್ಕೆ ಶೌಚ ಗುಂಡಿಗಳನ್ನು ದುರಸ್ತಿಗೊಳಿಸಿದರೆ ಸಾಕು’ ಎಂದು ಸ್ಥಳೀಯ ನಿವಾಸಿ ಗೋಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.