ಕರ್ನಾಟಕ ಪತ್ರಕರ್ತೆಯರ ಸಂಘ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೆ.ವಿ. ಪ್ರಭಾಕರ್ ಅವರು ಪದ್ಮಾ ಕೋಲಾರ, ಪೂರ್ಣಿಮಾ ರವಿ ಮತ್ತು ಸಬೀಹಾ ಬಾನು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ದೇಶದ ಪತ್ರಿಕೋದ್ಯಮದ ಮೊದಲ ಛಾಯಾಗ್ರಾಹಕಿ ಹೋಮಿ ವೈರ್ವಾಲ ಮತ್ತು ಮೊದಲ ಯುದ್ಧ ವರದಿಗಾರ್ತಿ ಪ್ರಭಾ ದತ್ ಅವರ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು. ಈ ಎರಡೂ ಪ್ರಶಸ್ತಿಗಳಿಗೆ ₹ 1 ಲಕ್ಷ ಪ್ರಶಸ್ತಿ ಮೊತ್ತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ’ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
ಕರ್ನಾಟಕ ಪತ್ರಕರ್ತೆಯರ ಸಂಘ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹೋಮಿ ವೈರ್ವಾಲ, ಪ್ರಭಾ ದತ್, ಕಮಲಾ ಮಂಕೇಕರ್ ಅವರು ಭಾರತೀಯ ಪತ್ರಿಕಾ ಕ್ಷೇತ್ರದಲ್ಲಿ ಯಾವತ್ತೂ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ದಾಖಲಿಸಿರುವುದು ಮಾತ್ರವಲ್ಲ, ಇಂದಿನ ಯುವ ಪತ್ರಕರ್ತೆಯರಿಗೆ ಸ್ಫೂರ್ತಿಯಾಗಿದ್ದಾರೆ. ಪುರುಷ ಪ್ರಾಬಲ್ಯವೇ ತುಂಬಿದ್ದ ಪತ್ರಿಕೋದ್ಯಮದಲ್ಲಿ ಈ ಮೂವರೂ ಪತ್ರಿಕೋದ್ಯಮದ ಮಾದರಿಗಳಾಗಿ ಉಳಿದಿದ್ದಾರೆ’ ಎಂದರು.
‘ತಂತ್ರಜ್ಞಾನದ ಕಾರಣಕ್ಕೆ ಮಾಧ್ಯಮ ಕ್ಷೇತ್ರ ಸಹ ಬೆಳೆದಿದೆ. ಪುರುಷರಂತೆ ಮಹಿಳೆಯರಿಗೂ ಹೆಚ್ಚೆಚ್ಚು ಅವಕಾಶಗಳು ಒದಗುತ್ತಿವೆ. ಮಾಧ್ಯಮಗಳ ನಿರ್ಣಾಯಕ ಹುದ್ದೆಗಳಲ್ಲಿ ಮಹಿಳೆಯರೇ ಇಲ್ಲ ಎನ್ನುವ ಪರಿಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ. ‘ಓ ವುಮೇನಿಯಾ’ ಸಂಸ್ಥೆ ನೀಡಿರುವ ವರದಿಯ ಪ್ರಕಾರ ಮಾಧ್ಯಮಗಳಲ್ಲಿ ಶೇಕಡ 13ರಷ್ಟು ಪ್ರಮುಖ ಹುದ್ದೆಗಳಲ್ಲಿ ಈಗ ಪತ್ರಕರ್ತೆಯರು ಇದ್ದಾರೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲೇ ಪತ್ರಿಕಾ ಛಾಯಾಗ್ರಾಹಕಿ ಮತ್ತು ಯುದ್ಧ ವರದಿಗಾರ್ತಿಗೆ ಪ್ರತಿ ವರ್ಷ ದತ್ತಿ ಪ್ರಶಸ್ತಿ ನೀಡಲಾಗುವುದು’ ಎಂದು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಘೋಷಿಸಿದರು.
ಇದೇ ವೇಳೆ ಬೆಂಗಳೂರು ದೂರದರ್ಶನ ಕೇಂದ್ರದ ವಾರ್ತಾವಾಚಕಿ ಸಬೀಹಾ ಬಾನು, ಪತ್ರಿಕಾ ಛಾಯಾಗ್ರಾಹಕಿ ಪೂರ್ಣಿಮಾ ರವಿ, ಸಫಾಯಿ ಕರ್ಮಚಾರಿಗಳ ಹೋರಾಟಗಾರ್ತಿ ಪದ್ಮಾ ಕೋಲಾರ ಅವರಿಗೆ ಪತ್ರಕರ್ತೆಯರ ಸಂಘದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಪತ್ರಕರ್ತೆ ವಿಜಯಾ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.