ADVERTISEMENT

ಜೀವನದ ಸಮತೋಲನ ಕಾಪಾಡುವುದೇ ಆಯುರ್ವೇದ: ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 14:48 IST
Last Updated 26 ಡಿಸೆಂಬರ್ 2025, 14:48 IST
ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಶುಕ್ರವಾರ ಗೊಂಬೆಗಳೊಂದಿಗೆ ಯುವತಿಯರು ನೃತ್ಯ ಮಾಡಿ ಸಂಭ್ರಮಿಸಿದರು.
ಪ್ರಜಾವಾಣಿ ಚಿತ್ರ
ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಶುಕ್ರವಾರ ಗೊಂಬೆಗಳೊಂದಿಗೆ ಯುವತಿಯರು ನೃತ್ಯ ಮಾಡಿ ಸಂಭ್ರಮಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಯುರ್ವೇದವು ಕೇವಲ ದೇಹಕ್ಕೆ, ರೋಗಕ್ಕೆ ಔಷಧ ನೀಡುವ ಪದ್ಧತಿಯಲ್ಲ. ಅದು ಜೀವನದ ಸಮತೋಲನವನ್ನು ಕಾಪಾಡುವ ವೈದ್ಯ ಪದ್ಧತಿ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಆಯುಷ್ ಸಚಿವಾಲಯ ಹಾಗೂ ರಾಜ್ಯ ಆಯುಷ್ ಇಲಾಖೆಯ ಸಹಯೋಗದಲ್ಲಿ ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್ ಹಮ್ಮಿಕೊಂಡಿರುವ ನಾಲ್ಕು ದಿನಗಳ ಆಯುರ್ವೇದ ವಿಶ್ವ ಸಮ್ಮೇಳನದ ಎರಡನೇ ದಿನ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನು ಕಫ, ಪಿತ್ತ, ವಾಯುಗಳನ್ನು ಸಮತೋಲನದಲ್ಲಿಟ್ಟುಕೊಂಡು ತನ್ನ ದೇಹದ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ದೇಹ, ಮನಸ್ಸು, ಇಂದ್ರಿಯ, ಬುದ್ಧಿ, ಅಹಂಕಾರ, ಚಿತ್ತ, ಪ್ರಾಣವನ್ನು ಪ್ರತಿಕ್ಷಣ ಬೆಳಗುವ ಆತ್ಮಶಕ್ತಿಯನ್ನು ಅನುಭವದಲ್ಲಿ ಕಂಡುಕೊಳ್ಳುವ ವಿಧಾನವನ್ನು ಆಯುರ್ವೇದ ಹೇಳಿಕೊಡುತ್ತದೆ’ ಎಂದು ವಿವರಿಸಿದರು.

ADVERTISEMENT

‘ಒಂದು ದೇಶದಲ್ಲಿ ಉಗಮವಾದ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಿಕ, ಕಲಾತ್ಮಕ, ಐತಿಹಾಸಿಕ, ವೈಜ್ಞಾನಿಕ, ಭೌಗೋಳಿಕ, ವೈದ್ಯಕೀಯ ಮುಂತಾದ ಮೌಲ್ಯಗಳು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ಧ್ರುವೀಕರಣಗೊಳ್ಳುತ್ತ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಜನಮಾನಸದಲ್ಲಿ ಸ್ಥಿರವಾಗಿ ನೆಲೆನಿಂತು ಜನಜೀವನದಲ್ಲಿ ಅಭಿವ್ಯಕ್ತವಾದಾಗ ಅದನ್ನು ಆ ದೇಶದ ಸಂಸ್ಕೃತಿ ಎಂದು ಕರೆಯುತ್ತೇವೆ. ಇಂಥ ಸಂಸ್ಕೃತಿಗೆ ಸೇರಿರುವಂಥದ್ದು ಆಯುರ್ವೇದ ಪದ್ಧತಿ’ ಎಂದು ತಿಳಿಸಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಜನಿಸಿ ವಿಕಾಸವಾದ ವೈದ್ಯ ಪದ್ಧತಿಯಾದ ಆಯುರ್ವೇದವು ಜಗತ್ತಿನಾದ್ಯಂತ ಹರಡಬೇಕು. ಇದು ನಮ್ಮ ಬದುಕಿನ ಮೂಲವಾಗಬೇಕು’ ಎಂದು ಆಶಿಸಿದರು.

ಆಯುರ್ವೇದ ಸಮ್ಮೇಳನದ ರೂವಾರಿ ಗಿರಿಧರ ಕಜೆ ಮಾತನಾಡಿ, ‘ರೋಗ ಬಂದಾಗ ನಿವಾರಣೆಯನ್ನು ಆಯುರ್ವೇದ ಸೂಚಿಸುತ್ತದೆ. ಜೊತೆಗೆ ಆರೋಗ್ಯವಾಗಿರುವವರು ರೋಗ ಬಾರದಂತೆ ಏನು ಮಾಡಬೇಕು ಎಂಬುದನ್ನೂ ಆಯುರ್ವೇದ ತಿಳಿಸಿಕೊಡುತ್ತದೆ. ದೇಹದ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಆರೋಗ್ಯ ಮತ್ತು ಸ್ವಾಸ್ಥ್ಯ ಎರಡೂ ಕಾಪಾಡಿಕೊಳ್ಳಲು ಆಯುರ್ವೇದ ಅಗತ್ಯ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ನಮ್ಮ ಸಂಸ್ಕೃತಿ ಹಾಗೂ ಜೀವನ ಪದ್ಧತಿಯನ್ನು ಮರು ಪರಿಷ್ಕರಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಮುಂದಿನ ಪೀಳಿಗೆಯನ್ನು ಸ್ವಾಸ್ಥ್ಯದಿಂದಿರಿಸಿ ಭಾರತ ವಿಶ್ವಗುರುವಾಗಲು ಆಯುರ್ವೇದ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ‘ಆಧುನಿಕ ವೈದ್ಯಕೀಯ ಪದ್ಧತಿ ತತ್ಕಾಲದ ಪರಿಹಾರವನ್ನು ಸೂಚಿಸಿದರೆ ಆಯುರ್ವೇದ ದೀರ್ಘಕಾಲಿಕ ಪರಿಹಾರವನ್ನು ನೀಡುತ್ತದೆ. ಆಯುರ್ವೇದ ನಮ್ಮ ನೆಲಮೂಲದ ಪದ್ಧತಿ’ ಎಂದು ಹೇಳಿದರು.

ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ, ರಾಮಕೃಷ್ಣ ಮಠದ ಸೌಖ್ಯಾನಂದ ಸ್ವಾಮೀಜಿ, ವಿಆರ್‌ಎಲ್‌ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಸಂಕೇಶ್ವರ ಉಪಸ್ಥಿತರಿದ್ದರು.

ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರ ಡಿ.ವಿ. ಸದಾನಂದ ಗೌಡ ಸುಖಾನಂದ ಜೀ ಮಹಾರಾಜ್ ಬಿ.ವೈ. ವಿಜಯೇಂದ್ರ ವಿನಯ್ ಗುರೂಜಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮತ್ತು ಗಿರಿಧರ ಕಜೆ ಅವರು ಧನ್ವಂತರಿ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ

ಪ್ರಮುಖ ಅಂಶಗಳು

* ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತಾಂತ್ರಿಕ ಉಪನ್ಯಾಸಗಳು ಬೇರೆ ಬೇರೆ ವೇದಿಕೆಯಲ್ಲಿ ನಡೆಯಿತು. ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

* ಎರಡನೇ ದಿನವೂ 100 ಸಾಧಕರಿಗೆ ಆಯುರ್ವೇದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. * ಚೆಂಡೆ ವಾದನಕ್ಕೆ ಕಲ್ಲಡ್ಕ ಗೊಂಬೆಗಳೊಂದಿಗೆ ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.