ADVERTISEMENT

ಬಹಿಷ್ಕಾರ: ಆಯುಷ್ ವೈದ್ಯಾಧಿಕಾರಿಗಳಿಂದ ಎಚ್ಚರಿಕೆ

ವಿಶೇಷ ಭತ್ಯೆಯನ್ನು ವಿಸ್ತರಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ * ತಾರತಮ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಮೇ 2021, 20:55 IST
Last Updated 29 ಮೇ 2021, 20:55 IST

ಬೆಂಗಳೂರು: ‘ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಿಗೂ ವಿಶೇಷ ಭತ್ಯೆಯನ್ನು ವಿಸ್ತರಿಸಬೇಕು. ಇಲ್ಲದಿದ್ದರೆ ಜೂನ್‌ 7ರಿಂದ ಕೋವಿಡ್ ನಿರ್ವಹಣೆಯ ಎಲ್ಲ ಕೆಲಸಗಳನ್ನು ಬಹಿಷ್ಕರಿಸಲಿದ್ದೇವೆ’ ಎಂದು ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘವು ಸರ್ಕಾರವನ್ನು ಎಚ್ಚರಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಂಘವು, ‘ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ಹೆಚ್ಚಿಸಿ, ಆದೇಶಿಸಲಾಗಿದೆ. ಕಾಲಕಾಲಕ್ಕೆ ನೀಡಲಾಗುವ ವೇತನ, ಭತ್ಯೆ ಮತ್ತು ಸ್ಥಾನಮಾನವನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಹೀಗಿದ್ದರೂ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ವಿಶೇಷ ಭತ್ಯೆಯನ್ನು ನೀಡಿರುವುದು ಅಸಮಂಜಸ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಜೆ. ಈರಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರತಿ ವೈದ್ಯರೂ ವಿವಿಧ ಜವಾಬ್ದಾರಿಗಳನ್ನುನಿರ್ವಹಿಸುತ್ತಿದ್ದಾರೆ. ಸರ್ಕಾರವು ನೀಡಿರುವ ಹೊಣೆಯಿಂದ ಯಾವೊಬ್ಬ ಆಯುಷ್ ವೈದ್ಯಾಧಿಕಾರಿಯೂ ನುಣುಚಿಕೊಂಡಿಲ್ಲ. ಕೋವಿಡ್ಆರೈಕೆ ಕೇಂದ್ರ, ತಪಾಸಣಾ ಕೇಂದ್ರ ಸೇರಿದಂತೆ ವಿವಿಧೆಡೆ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರವು ಅಲೋಪಥಿ–ಆಯುಷ್‌ ವೈದ್ಯಾಧಿಕಾರಿಗಳ ನಡುವೆ ತಾರತಮ್ಯ ಮಾಡದೆ ವಿವಿಧ ಸೇವೆಗಳಿಗೆ ನಿಯೋಜಿಸುತ್ತಿದೆ. ಆದರೆ, ವಿಶೇಷ ಭತ್ಯೆ ಪರಿಷ್ಕರಣೆ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಆರ್ಥಿಕ ಸೌಲಭ್ಯವನ್ನು ಕೆಲವರಿಗೆ ಮಾತ್ರ ವಿಸ್ತರಿಸಲಾಗಿದೆ’ ಎಂದು ಖೇದವ್ಯಕ್ತಪಡಿಸಿದ್ದಾರೆ.

ADVERTISEMENT

‘ಎಂ.ಬಿ.ಬಿ.ಎಸ್ ಮತ್ತು ಬಿ.ಡಿ.ಎಸ್ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ನೀಡಿರುವಂತೆ ಆಯುಷ್ವೈದ್ಯಾಧಿಕಾರಿಗಳಿಗೂ ಇದೇ 31ರೊಳಗೆ ಭತ್ಯೆ ಮಂಜೂರು ಆದೇಶ ಹೊರಡಿಸಬೇಕು. ಇಲ್ಲದಿದ್ದಲ್ಲಿ ಜೂನ್‌ 1ರಿಂದ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಿಸುತ್ತಲೇ ಪ್ರತಿಭಟನೆ ನಡೆಸುತ್ತೇವೆ. ಜೂನ್‌ 7ರಿಂದ ಎಲ್ಲ ರೀತಿಯ ಕೋವಿಡ್ ಕೆಲಸಕಾರ್ಯಗಳನ್ನು ಬಹಿಷ್ಕರಿಸಿ, ಮಾತೃ ಇಲಾಖೆಯ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಿಗೆ ಸೀಮಿತವಾಗಿ ಕರ್ತವ್ಯ ನಿರ್ವಹಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.