ADVERTISEMENT

‘ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 19:35 IST
Last Updated 12 ಏಪ್ರಿಲ್ 2022, 19:35 IST
ಪ್ರೊ. ಬಿ.ಕೆ. ಚಂದ್ರಶೇಖರ್
ಪ್ರೊ. ಬಿ.ಕೆ. ಚಂದ್ರಶೇಖರ್   

ಬೆಂಗಳೂರು: ‘ಜೆಜೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಂದ್ರಶೇಖರ್‌ ಹತ್ಯೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ನೀಡಿರುವ ಹೇಳಿಕೆಯನ್ನು ಬಿಜೆಪಿ ವಕ್ತಾರರು ಅಲ್ಲಗಳೆದಿರುವುದರ ಹಿಂದೆ ಪೊಲೀಸರ ಮೇಲೆ ಪ್ರಭಾವ ಬೀರುವ ಮತ್ತು ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಇದೆ’ ಎಂದು ಕಾಂಗ್ರೆಸ್‌ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ಕೊಲೆ ಘಟನೆಯ ಬಗ್ಗೆ ಗೃಹ ಸಚಿವರು ಬೆಳಿಗ್ಗೆ ನೀಡಿದ್ದ ಹೇಳಿಕೆಯನ್ನು ಸಂಜೆ ವಾಪಸು ಪಡೆದಿದ್ದಾರೆ. ಈ ಘಟನೆಯ ಕುರಿತು ಬಹಿರಂಗ ಹೇಳಿಕೆ ನೀಡುವ ಅಗತ್ಯ ಇತ್ತೇ’ ಎಂದು ಅವರು ಪ್ರಶ್ನಿಸಿದರು.

‘ಕೆಪಿಎಸ್‍ಸಿ ನಡೆಸಿದ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ಕುರಿತು ಸಿಐಡಿ ವರದಿಯನ್ನು ಒಪ್ಪುವುದಿಲ್ಲ ಎನ್ನುವ ರಾಜ್ಯ ಬಿಜೆಪಿ ಸರ್ಕಾರ, ಇದೀಗ ಚಂದ್ರಶೇಖರ್‌ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸುತ್ತಿದೆ. ಆಡಳಿತ ನಡೆಸುವ ಸರ್ಕಾರಕ್ಕೆ ಎರಡು ನಾಲಿಗೆ ಇರಬಾರದು. ಇವೆಲ್ಲ ನೋಡಿದರೆ ಸರ್ಕಾರದ ಆಡಳಿತ ವೈಫಲ್ಯ ಎದ್ದು ಕಾಣುತ್ತದೆ’ ಎಂದರು.

ADVERTISEMENT

‘ಆರೆಸ್ಸೆಸ್‌ ಸ್ಥಾಪನೆ ಆದಾಗಿನಿಂದಲೂ ಅನಧಿಕೃತ ಪ್ರಭುತ್ವ ಚಾಲನೆಯಲ್ಲಿದೆ. ಸಂಘ ಪರಿವಾರ ಹುಟ್ಟುಹಾಕಿದ ಹಲವು ಸಂಘಟನೆಗಳು ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿವೆ’ ಎಂದು ದೂರಿದರು.

‘ಧಾರವಾಡದಲ್ಲಿ 15 ದಿನದ ಹಿಂದೆಯೇ ದೇವಾಲಯದ ಆಡಳಿತ ಮಂಡಳಿಗೆ ಪತ್ರ ಬರೆದು ಅನ್ಯಧರ್ಮೀಯರ ಅಂಗಡಿ ತೆರವುಗೊಳಿಸದಿದ್ದರೆ ಧ್ವಂಸ ಮಾಡುವುದಾಗಿ ಹೇಳಿದ್ದರು. ಕಿಡಿಗೇಡಿಗಳು ಕಲ್ಲಂಗಡಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿ ಪೊಲೀಸರು ಇರಲಿಲ್ಲವೇ’ ಎಂದೂ ಅವರು ಪ್ರಶ್ನಿಸಿದರು.

ಐ‘ಲೋಕಸಭೆಯಲ್ಲಿ ಬಹುಮತ ಇರುವ ಬಿಜೆಪಿ, ರಾಜ್ಯ ಸಭೆಯಲ್ಲೂ ಬಹುಮತ ಗಳಿಸಿದರೆ ಸಂವಿಧಾನವನ್ನು ಬದಲಿಸುತ್ತದೆ. ಸಂವಿಧಾನ ಉಳಿಸಲು ಎಲ್ಲ ಸ್ವ ಪ್ರತಿಷ್ಠೆ ಬಿಟ್ಟು ವಿರೋಧ ಪಕ್ಷಗಳು ಒಗ್ಗೂಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.