ADVERTISEMENT

ಮರು ಪರೀಕ್ಷೆಗೆ ಕೆಪಿಸಿಎಲ್ ಮೀನಮೇಷ: ಸಿಎಂಗೆ ದೂರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 20:15 IST
Last Updated 12 ಸೆಪ್ಟೆಂಬರ್ 2019, 20:15 IST
   

ಬೆಂಗಳೂರು: ಕಿರಿಯ ಎಂಜಿನಿಯರ್ (ಜೆಇ) ಮತ್ತು ಸಹಾಯಕ ಎಂಜಿನಿಯರ್‌ (ಎಇ) ಹುದ್ದೆಗಳ ಭರ್ತಿಗೆ ಹೈಕೋರ್ಟ್‌ ಆದೇಶದಂತೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮರು ಪರೀಕ್ಷೆ ನಡೆಸದೆ ಅಭ್ಯರ್ಥಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದೆ ಎಂದು ಆರೋಪಿಸಿ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರು ನೀಡಿದರು.

ಗುರುವಾರ ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಆಕಾಂಕ್ಷಿಗಳು, ‘ಮನವಿಗೆ ಸ್ಪಂದಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವ ಆಲೋಚನೆ ಮಾಡಿದ್ದೇವೆ’ ಎಂದು ತಿಳಿಸಿದರು.

288 ಜೆಇ, 296 ಎಇ, ಕೆಮಿಸ್ಟ್‌ ಮತ್ತು ಕೆಮಿಕಲ್‌ ಸೂಪರ್‌ವೈಸರ್‌ ಸೇರಿ 622 ಹುದ್ದೆಗಳ ನೇಮಕಾತಿಗೆ 2017ರ ಆಗಸ್ಟ್ 3ರಲ್ಲಿ ಕೆಪಿಸಿಎಲ್ ಅಧಿಸೂಚನೆ ಹೊರಡಿಸಿತ್ತು. 2018ರ ಜನವರಿ 21ರಂದು ಖಾಸಗಿ ಏಜೆನ್ಸಿ ಮೂಲಕ ನಡೆದ ಲಿಖಿತ ಪರೀಕ್ಷೆಗೆ ಸುಮಾರು 44,411‌ ಅಭ್ಯರ್ಥಿಗಳು ಹಾಜರಾಗಿದ್ದರು.

ADVERTISEMENT

‘ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಲೋಪವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಹೇಳಿದೆ. ನ್ಯಾಯಾಲಯ ಆದೇಶ ನೀಡಿ 8 ತಿಂಗಳಾದರೂ ಪರೀಕ್ಷೆ ನಡೆಸಿಲ್ಲ. ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾದಾಗಲೆಲ್ಲ ಸಬೂಬು ಹೇಳಿ ಕಳುಹಿಸಿದ್ದಾರೆ. ಕೂಡಲೇ ಪರೀಕ್ಷೆ ನಡೆಸಲು ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.