ADVERTISEMENT

ನ್ಯಾಯಾಧೀಶರ ಮೇಲೆ ಕ್ರಮ ಏಕಿಲ್ಲ: ಬಿಜೆಪಿ ಮುಖಂಡ ಬಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 16:04 IST
Last Updated 25 ಫೆಬ್ರುವರಿ 2022, 16:04 IST
ಬಿ.ಸೋಮಶೇಖರ್
ಬಿ.ಸೋಮಶೇಖರ್   

ಬೆಂಗಳೂರು: ‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ಹಾಕಿದ ಆರೋಪದ ಮೇಲೆ ನಟ ಚೇತನ್‌ಕುಮಾರ್‌ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಅಂಥಹದೇ ಆಪಾದನೆ ಎದುರಿಸುತ್ತಿರುವ ಜಿಲ್ಲಾ ನ್ಯಾಯಾಧೀಶರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಬಿ.ಸೋಮಶೇಖರ್ ಆಗ್ರಹಿಸಿದ್ದಾರೆ.

‘ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸಬೇಕಲ್ಲವೇ, ಅದನ್ನು ಬಿಟ್ಟು ನ್ಯಾಯಾಧೀಶರನ್ನು ಕೇವಲ ವರ್ಗಾವಣೆ ಮಾಡಿರುವುದು ನ್ಯಾಯವೇ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

‘ಚೇತನ್‌ಕುಮಾರ್‌ ವಿರುದ್ಧ ಐಪಿಸಿ ಸೆಕ್ಷನ್ 505(2)(ಜಾತಿ, ಧರ್ಮ ಮತ್ತು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವುದು) ಹಾಗೂ ಸೆಕ್ಷನ್ 504 (ಅಪರಾಧ ಪ್ರಚೋದಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಜಿಲ್ಲಾ ನ್ಯಾಯಾಧೀಶರ ಆಪಾದಿತ ವರ್ತನೆಗೂ ಅನ್ವಯವಾಗುತ್ತದೆ. ಈ ಇಬ್ಬರ ನಡುವೆ ತಾರತಮ್ಯ ಏಕೆ’ ಎಂದು ಕೇಳಿದ್ದಾರೆ.

ADVERTISEMENT

‘ರಾಯಚೂರು ಜಿಲ್ಲಾ ನ್ಯಾಯಾಧೀಶರಾಗಿದ್ದವರುಜ.26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸುವ ಮೂಲಕ ಅಗೌರವ ತೋರಿಸಿದ್ದಾರೆ ಎಂಬ ಅಪಾದನೆಯಿದೆ. ಇದನ್ನು ಇಡೀ ರಾಜ್ಯವೇ ಖಂಡಿಸಿದೆ.‌ ಈ ಪ್ರತಿಭಟನೆಗಳ ಪರಾಕಾಷ್ಠೆಯಾಗಿ ಸಾವಿರಾರು ಜನರು ಬೆಂಗಳೂರಿಗೂ ಬಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ತಿಳಿಸಿದ್ದಾರೆ. ಮನವಿ ಸ್ವೀಕರಿಸಿರುವ ಮುಖ್ಯಮಂತ್ರಿ ಅವರು ಸೂಕ್ತ ಕ್ರಮದ ಭರವಸೆ ನಿಡಿರುವುದು ಸ್ವಾಗತಾರ್ಹ. ಆದರೆ, ತಕ್ಷಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.