ADVERTISEMENT

ಬಿ.ಟೆಕ್‌ ವಿದ್ಯಾರ್ಥಿ ಆತ್ಮಹತ್ಯೆ: ಸಹಪಾಠಿಗಳಿಂದ ಪ್ರತಿಭಟನೆ

ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಸಾವು * ಆಡಳಿತ ಮಂಡಳಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 18:48 IST
Last Updated 21 ಅಕ್ಟೋಬರ್ 2019, 18:48 IST
ಶ್ರೀಹರ್ಷ
ಶ್ರೀಹರ್ಷ   

ಬೆಂಗಳೂರು: ವರ್ತೂರು ಹೋಬಳಿಯ ‌ಕಸವನಹಳ್ಳಿಯಲ್ಲಿರುವ ಅಮೃತಾ ವಿಶ್ವವಿದ್ಯಾಪೀಠ ಎಂಜಿನಿಯರಿಂಗ್‌ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಬಿ.ಟೆಕ್‌ ಅಂತಿಮ ವರ್ಷದ ವಿದ್ಯಾರ್ಥಿ ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಂಧ್ರಪ್ರದೇಶದ ವಿಜಯಕುಮಾರ್‌ ಎಂಬುವವರ ಪುತ್ರ ಶ್ರೀಹರ್ಷ (24) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲಿ ರಾತ್ರಿವರೆಗೆ ಪ್ರತಿಭಟಿಸಿದರು.

ಕಾಲೇಜು ಹಾಸ್ಟೆಲ್‌ನಲ್ಲಿ ಶ್ರೀಹರ್ಷ ಉಳಿದುಕೊಂಡಿದ್ದ. ಹಾಸ್ಟೆಲ್‌ನಲ್ಲಿ ನೀರು ಮತ್ತು ಊಟದ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ಇದರ ವಿರುದ್ಧ ವಿದ್ಯಾರ್ಥಿಗಳು ಸೆ.23ರ ರಾತ್ರಿ ಪ್ರತಿಭಟಿಸಿದ್ದರು. ವಾರ್ಡನ್ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರ ತನಿಖೆಗೆ ಕಾಲೇಜು ಆಡಳಿತ ಮಂಡಳಿ ಶಿಸ್ತು ಸಮಿತಿ ರಚಿಸಿತ್ತು.

ADVERTISEMENT

ಸಮಿತಿಯು ಶ್ರೀಹರ್ಷ ಸೇರಿ 21 ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ಅಲ್ಲದೆ, ತಂದೆಯನ್ನು ಕರೆಸಲು ಶ್ರೀಹರ್ಷಗೆ ಕಾಲೇಜು ಆಡಳಿತ ಮಂಡಳಿ ಸೂಚಿಸಿತ್ತು. ಸೋಮವಾರ ಬೆಳಿಗ್ಗೆ ಕಾಲೇಜಿಗೆ ಬಂದಿದ್ದ ಶ್ರೀಹರ್ಷ ಅವರ ತಂದೆಗೆ ಒಳಪ್ರವೇಶಿಸಲು ಬಿಡದೆ ಗೇಟ್‌ನಲ್ಲೇ ನಿಲ್ಲಿಸಿದ್ದು, ಶ್ರೀಹರ್ಷನನ್ನು ಒಳಗೆ ಕರೆಸಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

ಆದರೆ, ಮಧ್ಯಾಹ್ನ 12.30ರ ಸುಮಾರಿಗೆ ಕಾಲೇಜು ಕಟ್ಟಡದಿಂದ ಶ್ರೀಹರ್ಷ ಜಿಗಿದಿದ್ದಾನೆ. ತಕ್ಷಣ ಕಾಲೇಜಿನ ಕಾರಿನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದ. ನಂತರ ತಂದೆಗೆ ಮಾಹಿತಿ ನೀಡಲಾಗಿದೆ.

ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಎಲ್ಲ ವಿದ್ಯಾರ್ಥಿಗಳ ಹೇಳಿಕೆ ಪಡೆದು ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

₹ 14 ಲಕ್ಷ ಪ್ಯಾಕೇಜ್?:‘ಕಾಲೇಜು ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿದ್ದ ಶ್ರೀಹರ್ಷನಿಗೆ ಕಂಪನಿಯೊಂದು ವಾರ್ಷಿಕ ₹ 14 ಲಕ್ಷ ಪ್ಯಾಕೇಜ್ ನೀಡಿತ್ತು. ಕಂಪನಿ ನೀಡಿದ್ದ ನೇಮಕಾತಿ ಪತ್ರವನ್ನು ಕಾಲೇಜು ಆಡಳಿತ ಮಂಡಳಿ ಹರಿದು ಹಾಕಿದೆ. ಶಿಸ್ತು ಪಾಲನಾ ಸಮಿತಿ ಆತನ ಅಮಾನತಿಗೆ ಶಿಫಾರಸು ಮಾಡಿತ್ತು. ಆತನ ತಂದೆ ಕರೆಸಿ ಅವಮಾನಿಸಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಸಹಪಾಠಿಗಳು ಆರೋಪಿಸಿದರು.

ಪ್ರತಿಭಟಿಸಿದ್ದ ವಿದ್ಯಾರ್ಥಿಗಳಿಗೆ ನೋಟಿಸ್‌

ಹಾಸ್ಟೆಲ್‌ನಲ್ಲಿ ಊಟ ಸರಿ ಇಲ್ಲ ಎಂದು ಪ್ರತಿಭಟಿಸಿದ್ದ ವಿದ್ಯಾರ್ಥಿಗಳನ್ನು ‘ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವರ್ಷ ಅವಧಿಗೆ ವಿದ್ಯಾರ್ಥಿಗಳನ್ನು ಅಮಾನತು ಮಾಡಬೇಕು’ ಎಂದು ಕಾಲೇಜಿನ ಶಿಸ್ತು ಪಾಲನಾ ಸಮಿತಿ ಅ.12ರ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು ಎನ್ನಲಾಗಿದೆ.

ಅಲ್ಲದೆ, ಪ್ರಸಕ್ತ ವರ್ಷದ ಪ್ರವೇಶಶುಲ್ಕ ಮುಟ್ಟುಗೋಲು ಹಾಕಿಕೊಳ್ಳಬೇಕು. ₹ 25 ಸಾವಿರ ದಂಡ ವಿಧಿಸಬೇಕು. ₹ 50 ಸಾವಿರ ಠೇವಣಿ ಜಮೆ ಮಾಡಿಸಬೇಕು. ಛಾಪಾ ಕಾಗದ ಮೇಲೆ ಪೋಷಕರ ಸಹಿ ಜತೆಗೆ ನಿಯಮ ಉಲ್ಲಂಘಿಸುವುದಿಲ್ಲ ಎಂದು ಬರೆದುಕೊಡಬೇಕು ಎಂದು ಷರತ್ತು ವಿಧಿಸಲು ಸೂಚಿಸಿತ್ತು.

ಕ್ಯಾಂಪಸ್ ಒಳಗೆ ಪ್ರವೇಶಿಸಲು ಮೇಲ್ವಿಚಾರಕ ಡಾ.ಟಿ.ಕೆ. ರಮೇಶ್ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ಶಾಶ್ವತ ನಿಷೇಧ ಹೇರಲಾಗುವುದು’ ಎಂದು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿತ್ತು ಎಂದೂ ಗೊತ್ತಾಗಿದೆ.

ಆಡಳಿತ ಮಂಡಳಿ ಹೊಣೆ: ಆರೋಪ

‘ಹಾಸ್ಟೆಲ್‌ನಲ್ಲಿ ಊಟ, ನೀರಿನ ವ್ಯವಸ್ಥೆ ಸರಿ ಇಲ್ಲ ಎಂದು ಪ್ರಶ್ನಿಸುವುದು ತಪ್ಪೇ? ಕಾಲೇಜಿನವರ ಕಿರುಕುಳದಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಶ್ರೀಹರ್ಷನ ತಂದೆ ವಿಜಯಕುಮಾರ್ ಆರೋಪಿಸಿದರು.

‘ನನ್ನನ್ನು ಕಾಲೇಜಿಗೆ ಕರೆಸಿ ಗೇಟ್ ಬಳಿಯೇ ನಿಲ್ಲಿಸಿದ್ದರು. ಮಗನನ್ನು ಒಳಗೆ ಕರೆದು ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ. ಮಹಡಿಯಿಂದ ಬಿದ್ದ ನಂತರವೂ ನನಗೆ ತಿಳಿಸದೆ ಆಸ್ಪತ್ರೆಗೆ ಸಾಗಿಸಿ, ರಕ್ತ ಸ್ವಚ್ಛ ಮಾಡಿಸಲಾಗಿದೆ. ಯಾವ ವಿದ್ಯಾರ್ಥಿಗೂ ಇಂಥ ಸ್ಥಿತಿ ಬರಬಾರದು. ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಅವರು ಆಗ್ರಹಿಸಿದರು.

ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿಷಯ ತಿಳಿಯುತ್ತಿದ್ದಂತೆ ಕಾಲೇಜಿನ ಆವರಣದಲ್ಲಿ ಗುಂಪುಗೂಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೊ, ಫೋಟೊಗಳನ್ನು ಆಡಳಿತ ಮಂಡಳಿಯವರು ಡಿಲೀಟ್ ಮಾಡಿದ್ದಾರೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.